'ಪ್ರೊ. ಎಲ್ ಬಿ ಅವರ ಹಾಸ್ಯಮಯ ಮಾತುಗಳನ್ನು ಇನ್ನೊಮ್ಮೆ ಬರೆಯುತ್ತೀನಿ ಎಂದಿದ್ದೆಯಲ್ಲಾ ಬರೆದೆಯಾ?' ಎಂದು ನನ್ನ ಬಹಳಷ್ಟು ಮಿತ್ರರು ಕೇಳುತ್ತಲೇ ಇದ್ದಾರೆ. ಹೀಗಾಗಿ ಬಿಡುವು ಮಾಡಿಕೊಂಡು ಬರೆಯತೊಡಗಿದ್ದೇನೆ.
ಚಿತ್ರದುರ್ಗ ಸಾಹಿತ್ಯ ಸಮ್ಮೇಳನದಲ್ಲಿ ಮಠಾಧೀಶರನ್ನೂ, ರಾಜಕಾರಣಿಗಳನ್ನು ಝಾಡಿಸಿ ಅಭೂತಪೂರ್ವ ಭಾಷಣ ಮಾಡಿದ ಡಾ. ಎಲ್. ಬಸವರಾಜು ಅವರು ಸಮ್ಮೇಳನಾಧ್ಯಕ್ಷರ ಭಾಷಣಕ್ಕೇ ಹೊಸ ಗತ್ತು ನೀಡಿದರು. ಆ ಪರಿ ದೂಳು, ಅವ್ಯವಸ್ಥೆ ಏನೇ ಇರಲಿ, ಎಲ್ ಬಿ ಅವರ ಭಾಷಣದಿಂದಾಗಿ ಚಿತ್ರದುರ್ಗ ಸಮ್ಮೇಳನ ಗಮನಾರ್ಹವಾಗಿದ್ದು ಸತ್ಯ. ಹಾಗೆ ನೋಡಿದರೆ, ಮಠಾಧೀಶರು, ರಾಜಕಾರಣಿಗಳನ್ನು ಪ್ರೊ. ಎಲ್ ಬಿ ಅವರು ಝಾಡಿಸಿದ್ದು ತೀರಾ ಅನಿರೀಕ್ಷಿತವಾಗಿರಲಿಲ್ಲ. ಸಮ್ಮೇಳನಕ್ಕೆ ಎರಡು ವಾರ ಮುಂಚೆ ನಾನು ಮೈಸೂರಿನಲ್ಲಿ ಎಲ್ ಬಿ ಅವರನ್ನು ಭೇಟಿಯಾದಾಗಲೂ ಅವರು ಮಠಾಧೀಶರು, ರಾಜಕಾರಣಿಗಳ ವಿರುದ್ಧ ಕೆಂಡ ಕಾರಿದ್ದರು. ಜೊತೆಗೆ ಪೊಳ್ಳು ಮಾತಿನ ಸಾಹಿತಿಗಳನ್ನು ಹಿಗ್ಗಾ-ಮುಗ್ಗಾ ಹಣಿದಿದ್ದರು. 90 ವರ್ಷದ ಆ ಹಿರಿಯ ಜೀವ ಹೀಗೆ ರಾಜಕಾರಣಿಗಳು ಮತ್ತು ಮಠಾಧೀಶರ ವಿರುದ್ಧ ಆಡಿದ ಕಟು ಮಾತುಗಳು ಪ್ರಾಯಶಃ ಮೊದಲು ಪ್ರಕಟವಾಗಿದ್ದು ಸಂಡೇ ಇಂಡಿಯನ್ ನಲ್ಲೇ. (ವಿವರಕ್ಕೆ http://www.thesundayindian.com/kannada/20090208/tryst_basavaraju.asp ಕ್ಲಿಕ್ಕಿಸಿ) ವ್ಯವಸ್ಥೆಯ ವಿರುದ್ಧ ಆ ಪರಿ ಸಿಟ್ಟಿದ್ದ ಅವರೊಂದಿಗಿನ ಸಂದರ್ಶನ ಮಾತ್ರ ತುಂಬಾ ತಮಾಷೆಯಿಂದ ಕೂಡಿತ್ತು. ಅವರ ಚತುರ ಮಾತಿನ ಒಂದೆರಡು ಸ್ಯಾಂಪಲ್ ಇಲ್ಲಿ ನೀಡಿದ್ದೇನೆ:
ಸಂದರ್ಶನದ ಮಧ್ಯೆ ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತಾಡ್ತಾ, "ಅದರ ಬಗ್ಗೆ ಮುಂದಿನ ಪ್ರಶ್ನೆ ಕೇಳಬೇಡಿ" ಅಂದುಬಿಟ್ಟರು. 'ಯಾಕೆ ಸರ್?' ಅಂದೆ ಕುತೂಹಲದಿಂದ. " ಹಿಂದೆ ನಮ್ಮ ವಿಕ್ರಮ್ -ಬೇತಾಳ್ ಕತೆಯಲ್ಲಿ ಮುಂದಿನ ಪ್ರಶ್ನೆ ಕೇಳಿದೆಯಾದೊಡೆ ನಿನ್ನ ತಲೆ ಒಡೆದು ಸಾವಿರ ಹೋಳಾಗಲಿ ಅಂತಾನಲ್ಲ ಬೇತಾಳ. ಹಾಗೆ ಶಿಕ್ಷಣದ ಬಗ್ಗೆ ಪ್ರಶ್ನೆ ಮಾಡೋ ಹಾಗೇ ಇಲ್ಲ. ಅಂಥ ಪರಿಸ್ಥಿತಿ ಸೃಷ್ಟಿ ಮಾಡಿಬಿಟ್ಟಿದ್ದಾರೆ" ಎಂದರು.
ಹೀಗೇ ಮಾತನಾಡುತ್ತಾ, "ನಮ್ಮ ದೇಶದಲ್ಲಿ ಪ್ರತಿಯೊಂದು ಕೂಡಾ ನಕಲು. ಶಿಕ್ಷಣ, ಆಡಳಿತ, ಕೊನೆಗೆ ಸಾಹಿತ್ಯವನ್ನು ಕೂಡಾ ನಕಲು ಮಾಡೋದೇ?... ಒರಿಜಿನಲ್ ಅಂತ ಏನೂ ಬೇಡವೇ? ಏನ್ ಸುಮ್ನೆ ಕೇಳ್ತಾ ಕುಂತಿದ್ದೀರಲ್ಲಾ ನಾರಾಯಣ ಸ್ವಾಮಿ, ಈ ಪಾಯಿಂಟ್ ಹಾಕ್ಕೊಳಿ.." ಎಂದು ನಕ್ಕರು. ಅದು ಅವರ ಮಾತಿನ ಶೈಲಿ. (ಅದು ಆಗ್ಗೆ ಹಾಸ್ಯದಂತೆ ಕಂಡರೂ, ತಾವು ಹೇಳಿದ್ದನ್ನೆಲ್ಲಾ ಎಲ್ಲರಂತೆ ಬರೆದುಕೊಳ್ಳಿ ಅರ್ಥಾತ್ ನಕಲು ಮಾಡಿಕೊಳ್ಳಿ ಎಂಬ ವ್ಯಂಗ್ಯವೂ ಆ ಮಾತಿನಲ್ಲಿತ್ತು!)
ವರದಕ್ಷಿಣೆ ಪಿಡುಗಿನ ಬಗ್ಗೆ ಅಂತೂ ಕೆಂಡಕಾರಿದರು. "ಅಲ್ಲಾ ಜಾತಿಗೊಬ್ಬರು ಮಠಾಧೀಶರು, ಸ್ವಾಮೀಜಿಗಳು ಇದ್ದಾರಲ್ಲಾ, ಇವರೆಲ್ಲಾ ಆಯಾ ಸಮುದಾಯವರಲ್ಲಿ ವರದಕ್ಷಿಣೆ ತಗೋಳದನ್ನಾ ನಿಷೇಧ ಮಾಡೋಕೆ ಯಾಕೆ ಮುಂದಾಗಬಾರದು. ಜನ ಕಾನೂನು ಪಾಲನೆ ಮಾಡೊಲ್ಲ. ಆದರೆ ಸ್ವಾಮೀಜಿಗಳ ಮಾತು ಕೇಳ್ತಾರೆ..." ಬರ್ಕೊಳಿ ಈ ಪಾಯಿಂಟ್ ನ ಅಂತ ಕಣ್ಣು ಮಿಸುಕುತ್ತಲೇ ಹೇಳಿದರು.
ನಮ್ಮ ವ್ಯವಸ್ಥೆಯ ಬಗ್ಗೆ ಸಾಕಷ್ಟು ಟೀಕೆ ಮಾಡಿದ ಮೇಲೆ, ಮೆಲ್ಲಗೆ ಒಂದು ಪ್ರಶ್ನೆ ಕೇಳಿದರು: "ನಾರಾಯಣ ಸ್ವಾಮಿ, ನಮ್ಮ ದೇಶ, ಸಂಸ್ಕೃತಿ, ಇಲ್ಲಿನ ವ್ಯವಸ್ಥೆಯನ್ನೆಲ್ಲಾ ನಾನು ತುಂಬಾ ಬೈತಾ ಇದೀನಿ ಅಂತ ಅನ್ನಿಸ್ತಾ ಇದೆಯಾ?" ನಾನು 'ಛೇ ಛೇ' ಎಂದೆ. ಮತ್ತೆ ಅದೇ ಪ್ರಶ್ನೆ ಕೇಳಿ, "ನಿಮಗೆ ಹಾಗೆ ಅನಿಸಿದರೆ ನಾನು ವಿವೇಕಸ್ಥ ಅಂತ ಅರ್ಥ" ಎಂದು ನಕ್ಕರು.
ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳನ್ನು ಬಯ್ಯುತ್ತಾ, "ನಾನು ಈ ಮುಂಚೆ ಹೀಗೆ ಬಯ್ದಿದ್ದರೆ, 'ಓ ಇವನ್ನ ನಾವು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮಾಡಿಬಿಟ್ಟರೆ ಏನು ಗತಿ ಅಂತ, ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡ್ತಾನೇ ಇರಲಿಲ್ಲವೇನೋ. ಆದರೆ ಈಗ ಅಧ್ಯಕ್ಷನಾಗಿ ನನ್ನ ಹೆಸರು ಅನೌನ್ಸ್ ಮಾಡಿಬಿಟ್ಟಿದ್ದಾರೆ. ಹೀಗಾಗಿ ನಾನು ಧೈರ್ಯದಿಂದ ಟೀಕೆ ಮಾಡ್ಬಹುದು. ಏನಂತೀರಾ ನಾರಾಯಣಸ್ವಾಮಿ?" ಎಂದು ನಕ್ಕರು.
ನನಗೆ ಬೇಕಾದ ಪ್ರಶ್ನೆಗಳನ್ನೆಲ್ಲಾ ಕೇಳಿದ ಮೇಲೆ, ನಿಮ್ಮ ಸುದೀರ್ಘವಾದ ಅಧ್ಯಾಪನ ವೃತ್ತಿಯ ಸ್ವಾರಸ್ಯಕರ ಸಂಗತಿಯೊಂದನ್ನು ಹೇಳಿ ಎಂದೆ. "ಸ್ವಾರಸ್ಯಕರ ಸಂಗತಿಯೇ?, ದೇವರ ದಯೆಯಿಂದ ಯಾವ ವಿದ್ಯಾರ್ಥಿಯೂ ನನ್ನ ಮೇಲೆ ಹಲ್ಲೆ ನಡೆಸಲಿಲ್ಲ. ಅದೇ ಸ್ವಾರಸ್ಯ" ಎಂದು ನಕ್ಕರು. "ಆಗ ಅಧ್ಯಾಪಕರು ಅಂದ್ರೆ ಭಯ-ಭಕ್ತಿ ಇರೋ ವಿದ್ಯಾರ್ಥಿಗಳೂ ಇದ್ದರು. ಈಗಿನ ಹಾಗಲ್ಲ" ಎಂಬ ಮಾತೂ ಸೇರಿತು.
ಸಂದರ್ಶನದ ಕೊನೆಗೆ, "ನಿಮ್ಮ ಸಾಂಸಾರಿಕ ಜೀವನದ ಬಗ್ಗೆ ಹೇಳಿ" ಎಂದೆ. ಈ ಪ್ರಶ್ನೆ ಕೇಳಿದಾಗ ಎಲ್ ಬಿ ಅವರ ಶ್ರೀಮತಿಯವರೂ ಬಳಿಯಲ್ಲೇ ಇದ್ದರು. "ನನ್ನ ಪತ್ನಿ ತುಂಬಾ ಕಷ್ಟ ಪಟ್ಟವಳು. ಸಂಸಾರದ ಭಾರ ನನ್ನ ಮೇಲೆ ಹೊರಿಸಲೇ ಇಲ್ಲ. ಹೀಗಾಗಿ ಸಾಹಿತ್ಯದಲ್ಲಿ ನಾನು ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯ ಆಯಿತು. ತಿಂಗಳಿಗೊಂದು ಸಲ ಒಂದು ಸಣ್ಣ ಪೇಪರ್ ನ ಅವಳ ಕೈಗೆ ಕೊಡುತ್ತಿದ್ದೆ, ಅಷ್ಟೆ. (ಪೇಪರ್ ಎಂದರೆ ಸ್ಯಾಲರಿ ಚೆಕ್!). ಅಷ್ಟು ಬಿಟ್ಟರೆ ಸಂಸಾರದ ಕಡೆ ಗಮನವನ್ನೇ ಕೊಡ್ತಿರಲಿಲ್ಲ ನಾನು. ಆದರೆ ಒಂಚೂರೂ ಗೊಣಗಾಡದೆ ಸಂಸಾರ ತೂಗಿಸಿದವಳು ಅವಳು" ಎಂದು ಗಂಭೀರವಾಗೇ ಹೇಳಿದರು. ಮರುಕ್ಷಣವೇ ಮೆಲುದನಿಯಲ್ಲಿ, "ಅವಳು ಎದುರಿಗೆ ಇದ್ದಾಳೆ ಅಂತ ಹೀಗೆ ಹೊಗಳ್ತಾ ಇದೀನಿ. ಇಲ್ದೇ ಹೋದ್ರೆ ನೀವು ಹೋದ ಮೇಲೆ ನನ್ನನ್ನ ಅವ್ಳು ಬಿಡ್ತಾಳೆಯೇ?" ಎಂದರು. ಅವರ ಪತ್ನಿಯೂ ಸೇರಿದಂತೆ ಎಲ್ಲರೂ ನಕ್ಕೆವು. ನನ್ನ ಜೊತೆ ಎಲ್ ಬಿ ಅವರ ಶಿಷ್ಯರಾದ ನಾಗಣ್ಣ ಅವರೂ ಇದ್ದರು. ತರಂಗಕ್ಕೆ ಈ ಮುನ್ನ ಎಲ್ ಬಿ ಸಂದರ್ಶನ ಮಾಡಿದ್ದ ಅವರು ಫೋಟೋ ತೆಗೆಸಲು ತಿಪ್ಪೇಸ್ವಾಮಿ ಅವರ ಜೊತೆ ಬಂದಿದ್ದರು. ಎಲ್ ಬಿ ಮತ್ತು ಅವರ ಶ್ರೀಮತಿಯವರ ಫೋಟೋ ತೆಗೆಯುವುದಾಗಿ ತಿಪ್ಪೇಸ್ವಾಮಿ ಕೋರಿಕೊಂಡರು. ಆಗ ಎಲ್ ಬಿ ಅವರು ತಮ್ಮ ಶ್ರೀಮತಿ ಪಕ್ಕ ಫೋಟೋಗೆ ಪೋಸ್ ಕೊಡಲು ನಿಲ್ಲುತ್ತಾ, "ಈ ಛಾಯಾಗ್ರಾಹಕರು ಎಷ್ಟು ಒಳ್ಳೆ ಕೆಲಸ ಮಾಡ್ತಾರೆ ನೋಡಿ. ಗಂಡ-ಹೆಂಡಿರನ್ನ ಒಂದುಗೂಡಿಸೋ ಕೆಲ್ಸ ಮಾಡ್ತಾರೆ. ನಿಜವಾಗಿಯೂ ಇವರಿಗೆ ನೋಬೆಲ್ ಶಾಂತಿ ಪುರಸ್ಕಾರ ಕೊಡಿಸಬೇಕು" ಎಂಬ ಚಾಟಿ ಎಸೆದರು. ಫೋಟೋ ತೆಗೆವುದು ಮರೆತು ತಿಪ್ಪೇಸ್ವಾಮಿ ನಗುತ್ತಾ ನಿಂತರು.
ವ್ಯವಸ್ಥೆಯ ವಿರುದ್ಧದ ಎಲ್ ಬಿ ಅವರ ಸಿಟ್ಟು, ತಮಾಷೆ, ಮಾತಿನ ಪಂಚ್, ಟೈಮಿಂಗ್, ಜೀವನ ಪ್ರೀತಿ, ಸರಳತೆ ಇವುಗಳಿಗೆ ಮಾರು ಹೋಗದೇ ಇರಲು ಹೇಗೆ ಸಾಧ್ಯ? ಆ ಪ್ರಾಜ್ಞರು ವಯಸ್ಸಿನಲ್ಲಿ ನನಗಿಂತ ಮೂರು ಪಟ್ಟು ಹಿರಿಯರು. ನಾನು ಹುಟ್ಟುವ ಹೊತ್ತಿಗಾಗಲೇ ಅವರು ನಿವೃತ್ತರಾಗಿದ್ದರು. ಅವರೊಂದಿಗೆ ಕಳೆದ ಆ ಎರಡು ಗಂಟೆಗಳು, ನನ್ನ ಅಮೂಲ್ಯ ಕ್ಷಣಗಳು...
Subscribe to:
Post Comments (Atom)
1 comment:
ಸರ್ ನಮಸ್ತೆ...
ಎಲ್.ಬಿ. ಅವರು ಹಾಸ್ಯದಲ್ಲಿಯೇ 'ವಾಸ್ತವ'ವನ್ನು ತೆರೆದಿಟ್ಟಿದ್ದಾರೆ ಅಲ್ವಾ?
ಬಹುಶಃ ಮಠಾಧೀಶರನ್ನು ಪ್ರಶ್ನಿಸಿದ ಮೊದಲ ಸಾಹಿತಿ ಎಲ್ ಬಿ ಅನಿಸುತ್ತೆ. "ಅಲ್ಲಾ ಜಾತಿಗೊಬ್ಬರು ಮಠಾಧೀಶರು, ಸ್ವಾಮೀಜಿಗಳು ಇದ್ದಾರಲ್ಲಾ, ಇವರೆಲ್ಲಾ ಆಯಾ ಸಮುದಾಯವರಲ್ಲಿ ವರದಕ್ಷಿಣೆ ತಗೋಳದನ್ನಾ ನಿಷೇಧ ಮಾಡೋಕೆ ಯಾಕೆ ಮುಂದಾಗಬಾರದು?" ಈ ಮಾತು ಎಷ್ಟೊಂದು ಅರ್ಥಪೂರ್ಣವಾದುದು..ಇದನ್ನು ಮಠಾಧೀಶರು ಅರ್ಥಮಾಡಿಕೊಳ್ತಾ ಇದ್ದಿದ್ದರೆ ನಮ್ಮ ದೇಶದಲ್ಲಿ ಹಿಂದುಳಿದ, ಬಡ ಜಾತಿವರ್ಗವೇ ಇರ್ತಾ ಇರಲಿಲ್ಲ ಅಲ್ವಾ? ಒಳ್ಳೆಯ ಬರಹ ಕೊಟ್ಟಿದ್ದಕ್ಕೆ ವಂದನೆಗಳು ಸರ್.
ಪ್ರೀತಿಯಿಂದ,
ಚಿತ್ರಾ
Post a Comment