Friday 3 April 2009

ಬಿಡುವೇ ಗೊತ್ತಿಲ್ಲದ ಆ ದೈತ್ಯನ ಹೆಸರು ಟಿಆರ್ ಶಿವಪ್ರಸಾದ್

ದಾವಣಗೆರೆ ದಿನಗಳಲ್ಲಿ ಕಚೇರಿಗೆ ಹೋದ ಕೂಡಲೇ ಎಲ್ಲಾ ದಿನಪತ್ರಿಕೆಗಳನ್ನೂ ಮುಂದೆ ಹರಡಿಕೊಂಡು ಒಂದೊಂದನ್ನೇ ವಿಶ್ಲೇಷಿಸುವುದು ನನಗೆ ಅತ್ಯಂತ ಆಪ್ಯಾಯಮಾನವಾದ ಸಂಗತಿಯಾಗಿತ್ತು.
ನನ್ನ ಸಹೋದ್ಯೋಗಿಗಳಾಗಿದ್ದ ಸಚ್ಚಿದಾನಂದ ಮತ್ತು ಡೆಕ್ಕನ್ ಹೆರಾಲ್ಡ್ ನ ಗಿರೀಶ್ ಕೆರೋಡಿ ಅವರೂ ಈ ಕಾರ್ಯದಲ್ಲಿ ಸೇರಿಕೊಳ್ಳುತ್ತಿದ್ದರು. ಒಂದು ದಿನ ವಿಜಯ ಕರ್ನಾಟಕ ಪತ್ರಿಕೆಯನ್ನು ನೋಡಿದ ಕೂಡಲೇ ನಾನು "ಇದೇನಿದು ಆಶ್ಚರ್ಯ, ಇವತ್ತು ಟಿ.ಆರ್. ಶಿವಪ್ರಸಾದನ ಯಾವುದೇ ವಿಶೇಷ ವರದಿ ಬಂದಿಲ್ಲವಲ್ಲಾ?" ಅಂತ ಉದ್ಗಾರ ತೆಗೆದೆ. ಆ ದಿನಗಳಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಶಿವಪ್ರಸಾದನ ಒಂದಾದರೂ ಲೇಖನ ಪ್ರಕಟಗೊಳ್ಳುವುದು ಕಾಯಂ ಆಗಿತ್ತು. ಆತನ ವಿಶೇಷ ವರದಿ ಪ್ರಕಟಗೊಳ್ಳದ ದಿನ ಅಪರೂಪ ಎಂಬಂತಿತ್ತು. ನಾವು ಯಾವುದಾದರೊಂದು ಸ್ಕೂಪ್ ಬಗ್ಗೆ ಚರ್ಚಿಸಿ ಅದನ್ನು ನಾಳೆ ಮಾಡಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ನಾಳಿನ ವಿಕೆಯಲ್ಲಿ ಅದು ಶಿವಪ್ರಸಾದ್ ಬೈಲೈನ್ ನಲ್ಲಿ ಪ್ರಕಟಗೊಂಡು ಬಿಟ್ಟಿರುತ್ತಿತ್ತು. ಸದಾ ಓಡಾಡುತ್ಥಾ ಏನಾದರೊಂದು ಮಾಡುತ್ತಲೇ ಇದ್ದ ಆತ ಆಕಾರದಲ್ಲಿ ವಾಮನನಾದರೂ ನಮಗೆಲ್ಲಾ ದೈತ್ಯನಂತೆ ಕಾಣುತ್ತಿದ್ದ.
ನಾನು ಮೊದಲು ಆತನನ್ನು ನೋಡಿದ್ದು ಬೆಂಗಳೂರಿನ ಭಾರತೀಯ ವಿದ್ಯಾ ಭವನದ ನಮ್ಮ ಜರ್ನಲಿಸಂ ತರಗತಿಯಲ್ಲಿ. ನಾನು ಕನ್ನಡ ಮೀಡಿಯಂ, ಆತ ಇಂಗ್ಲಿಷ್ ಮೀಡಿಯಂ. ಆದರೂ ಕನ್ನಡ ಮೀಡಿಯಂ ತರಗತಿಗಳಲ್ಲೇ ಒಳ್ಳೆ ಫ್ಯಾಕಲ್ಟಿ ಇದ್ದಾರೆ ಅಂತ ಆತನ ತರಗತಿ ಮುಗಿಸಿಕೊಂಡು ನಮ್ಮ ತರಗತಿಗೂ ಅಟೆಂಡ್ ಆಗುತ್ತಿದ್ದ. ಕಾಲೇಜು ಹುಡುಗರು ಒಂದು ಕ್ರಿಕೆಟ್ ಟೂರ್ನಿ ಮಾಡಬೇಕು ಎಂದುಕೊಳ್ಳಲಿ, ಒಂದು ಕಲ್ಚರಲ್ ಕಾರ್ಯಕ್ರಮ ಕೊಡಬೇಕು ಎಂದುಕೊಳ್ಳಲಿ ಎಲ್ಲವನ್ನೂ ಮುಂದೆ ನಿಂತು ಅದ್ಭುತವಾಗಿ ಸಂಘಟಿಸುತ್ತಿದ್ದ. ಕಾಲೇಜು ದಿನಗಳಲ್ಲೇ ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ನನ್ನ ನುಡಿಚಿತ್ರವೊಂದು ಮುಖಪುಟದಲ್ಲೇ ಪ್ರಕಟಗೊಂಡಿದ್ದನ್ನು ಮುಂಜಾನೆ ತರಗತಿಗೆ ಬಂದಕೂಡಲೇ ಮೊದಲು ನನ್ನ ಗಮನಕ್ಕೆ ತಂದವನು ಆತನೇ. ಕಾಲೇಜು ದಿನಗಳು ಮುಗಿದವು. ನಾನು ಬೆಂಗಳೂರಿನ ಸಮಸ್ತ ಪತ್ರಿಕಾ ಕಚೇರಿಗಳಿಗೆ ಕೆಲಸಕ್ಕಾಗಿ ಅಲೆದಾಡುತ್ತಾ, ಫ್ರೀಲ್ಯಾನ್ಸ್ ಆಗಿ ಬರೆಯುತ್ತಾ ಉಳಿದುಬಿಟ್ಟೆ. ಅವನು ಈ ಟಿವಿಯ ಎಂಟರ್ ಟೇನ್ ಮೆಂಟ್ ಸೆಕ್ಷನ್ ನಲ್ಲಿ ಕೆಲಸ ಗಿಟ್ಟಿಸಿ ಹೈದರಾಬಾದಿಗೆ ಜಿಗಿದ. ಆನಂತರ ವಿಜಯ ಕರ್ನಾಟಕದ ಬಿಜಾಪುರ-ಬಾಗಲಕೋಟೆ ಕರೆಸ್ಪಾಂಡೆಂಟ್ ಆಗಿ ಒಂದಷ್ಟು ವರ್ಷ ಇದ್ದು ನಂತರ ದಾವಣಗೆರೆಗೆ ಬಂದ. ಅದೇ ವೇಳೆ ನಾನೂ ಕೂಡಾ ಪ್ರಜಾವಾಣಿಗೆ ಸೇರಿ ದಾವಣಗೆರೆಗೆ ಬಂದೆ. ಆನಂತರ ವಿಜಯ ಕರ್ನಾಟಕದಲ್ಲಿ ಪ್ರಕಟಗೊಳ್ಳುತ್ತಿದ್ದ ಆತನ ಬೈಲೈನ್ ವರದಿಗಳನ್ನು ಓದುತ್ತ ಓದುತ್ತಲೇ ದಾವಣಗೆರೆಯಲ್ಲಿ ಮೂರೂವರೆ ವರ್ಷಗಳನ್ನು ಕಳೆದುಬಿಟ್ಟೆ. ಈ ಮಧ್ಯೆ ಆತ ವಿಜಯ ಟೈಮ್ಸ್ ಸೇರಿ ಅಲ್ಲೂ ಬರೆಯತೊಡಗಿದ. ನಾನು ಪಿವಿ ಬಿಟ್ಟು 'ಸಂಡೆ ಇಂಡಿಯನ್' ಸೇರಿ ದಿಲ್ಲಿಗೆ ಹಾರಿದೆ. ಆತ ಕೂಡಾ ವಿಕೆ ಬಿಟ್ಟು ಟಿವಿ-9 ಸೇರಿ ದಿಲ್ಲಿಗೆ ಬಂದ. ಕಾಲೇಜು ದಿನಗಳಲ್ಲಿ ಬೆಂಗಳೂರಿನ ವಿಧಾನಸೌಧ, ಎಂಜಿ ರಸ್ತೆ ಸುತ್ತ-ಮುತ್ತ ಅಲೆದಾಡುತ್ತಿದ್ದ ಹಾಗೇ ದಿಲ್ಲಿಯ ಸರೋಜಿನಿ ಮಾರ್ಕೆಟ್, ಪಾರ್ಲಿಮೆಂಟ್ ಭವನದ ಸುತ್ತ-ಮುತ್ತಲೂ ಅಲೆದಾಡತೊಡಗಿದೆವು. 26/11ನ ಮುಂಬೈ ದಾಳಿಯನ್ನು ಆತ ವರದಿ ಮಾಡಿದ ರೀತಿ ಕರ್ನಾಟಕದಲ್ಲೇ ಲೋಕವಿಖ್ಯಾತವಾಯಿತು.
ಪತ್ರಿಕೋದ್ಯಮದ ಕುದುರೆ ಸವಾರಿಯಲ್ಲಿ ಸಿಲುಕಿರುವ ನಾವು ಸದಾ ಟೈಮಿಲ್ಲಾ ಎಂದು ಒದ್ದಾಡುತ್ತಿದ್ದರೆ ಆತ ಮಾತ್ರ ತನ್ನೆಲ್ಲಾ ವರದಿಗಾರಿಕೆಯ ಮಧ್ಯೆಯೇ ಪುಸ್ತಕ, ಬ್ಲಾಗುಗಳನ್ನೂ ನಿಯಮಿತವಾಗಿ ಬರೆಯುವುದನ್ನು ರೂಢಿಸಿಕೊಂಡ. ಈಗಾಗಲೇ ಮೂರು ಬ್ಲಾಗುಗಳನ್ನು ಹೊಂದಿರುವ ಆತ ಆ ನಿಟ್ಟಿನಲ್ಲಿ 'ತ್ರಿವಿಧ ಬ್ಲಾಗೋಹಿ'! ಇದೆಲ್ಲದರ ಮಧ್ಯೆ ಚಲನಚಿತ್ರದಲ್ಲೂ ಆತನ ಅಭಿರುಚಿ ಅಸದೃಶವಾದುದೇ. ಯಾವುದೇ ಒಳ್ಳೆಯ ಸಿನಿಮಾ ಬಂದರೂ ಅದನ್ನು ತಪ್ಪದೇ ನೋಡಿ ನಾವೂ ನೋಡುವಂತೆ ಪ್ರೇರೇಪಿಸುವುದನ್ನು ಆತ ಮರೆಯುವುದಿಲ್ಲ. ಆತನ 'ಸುಭಾಷ್ ಸಾವಿನ ಸುತ್ತಾ' ಮತ್ತು 'ಚಂದ್ರಯಾನ' ಪುಸ್ತಕಗಳು ಉತ್ತಮ ಮಾಹಿತಿ ಹೊತ್ತು ಸಕಾಲದಲ್ಲಿ ಮಾರುಕಟ್ಟೆಗೆ ಬಂದು ಹೆಸರು ಮಾಡಿದವು. 'ಚಂದ್ರಯಾನ' ಪುಸ್ತಕವನ್ನಂತೂ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ದಿಲ್ಲಿಯಲ್ಲಿ ಬಿಡುಗಡೆ ಮಾಡಿ ಬೆನ್ನುತಟ್ಟಿದರು. ನನ್ನ ಕೆಲಸಗಳ ಗಡಿಬಿಡಿಯಲ್ಲಿ ಆ ಪುಸ್ತಕಕ್ಕೊಂದು ಲೇಖನ ಬರೆದುಕೊಡಲೂ ನನಗೆ ಸಾಧ್ಯವಾಗಲಿಲ್ಲ. ಚಂದ್ರಯಾನದ ಬೆನ್ನಿಗೇ ಆತನ ಮತ್ತೊಂದು ಪುಸ್ತಕ ಈಗ ಬಿಡುಗಡೆಗೆ ಸಿದ್ಧವಾಗಿದೆ.
ಏಪ್ರಿಲ್ 13ರ ದಿನದ ಮಹತ್ವ ನಮ್ಮ ತಲೆಮಾರಿನವರಿಗೆ ಅರಿವಿಲ್ಲದಿರಬಹುದು. 1919ರ ಆ ದಿನ ಅಮೃತಸರದ ಜಲಿಯನ್ ವಾಲಾ ಬಾಗ್ ನಲ್ಲಿ ಸೇರಿದ್ದ ಅಮಾಯಕ ಭಾರತೀಯರ ಮೇಲೆ ಬ್ರಿಟಿಷ್ ಸರ್ಕಾರ ನಡೆಸಿದ ಬರ್ಬರ ದಾಳಿಯನ್ನು ಎಂದೂ ಮರೆಯುವಂತಿಲ್ಲ. 1500ಕ್ಕೂ ಹೆಚ್ಚು ಮಂದಿ ಗುಂಡಿಗೆ ಬಲಿಯಾದ ದುರ್ದಿನ ಅದು. ಘಟನೆ ನಡೆದು ಇದೀಗ 90 ವರ್ಷ. ಈ ಸಂಬಂಧ ಶಿವು ಬರೆದ ಟೈಮ್ಲಿ ಪುಸ್ತಕ 'ಜಲಿಯನ್ ವಾಲಾ ಬಾಗ್' ಬರುವ ಏಪ್ರಿಲ್ 13ರ ಸಂಜೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ...
ಬಿಡುವೇ ಗೊತ್ತಿಲ್ಲದ ಆ ದೈತ್ಯನ ಬಗ್ಗೆ ಅಚ್ಚರಿಗೊಳ್ಳುತ್ತಲೇ ಪುಸ್ತಕ ಎದುರು ನೋಡುತ್ತಿದ್ದೇನೆ.