Friday 28 September 2007

ಸೂರ್ಯ ಕಾಂತಿ


ಸೂರ್ಯ ಎಂಬ ಸೂರ್ಯ ಹೊತ್ತು-ಗೊತ್ತು ಇಲ್ಲದೆ ರಣರಣ ಉರಿಯುವುದನ್ನೇ ಬದುಕು ಮಾಡಿಕೊಂಡಿದ್ದ: ಮೂಡಣ ಬೆಟ್ಟದಲ್ಲಿ ಹುಟ್ಟೋದು, ಪಡುವಣ ಬೆಟ್ಟದಲ್ಲಿ ಮುಳುಗೋದು -ಇಷ್ಟು ಬಿಟ್ಟು ಬೇರೆ ಗೊತ್ತಿಲ್ಲದ ಅವನಿಗೆ ಅದೆಂಥಾ ಏಕತಾನತೆ ಕಾಡಿತ್ತೆಂದರೆ ಛೇ 'ಇದೂ ಒಂದು ಬಾಳೇ, ಒಂದು ಬದುಕೇ' ಎಂದು ರೋಸಿ ಹೋದ. ಹೀಗೆ ಅತ್ತಗೆ ಅವನು ರೋಸಿ ಹೋಗಿರುವಾಗ ಇತ್ತಗೆ ಮೂಡಣ ಬೆಟ್ಟದಿಂದ ಪಡುವಣ ಬೆಟ್ಟದವರೆಗೆ ನೋಡುನೋಡುತ್ತಿದ್ದಂತೆಯೇ ಥರಾವರಿ ಹೂವಿನ ಗಿಡಗಳು ಚಿಗುರಿದವು. ಏನು ಕಾಡು ಮಲ್ಲಿಗೆ-ಕೆಂಡ ಸಂಪಿಗೆ; ನೀಲಾಂಬರ-ಕನಕಾಂಬರ, ಜಾಜಿ-ಸೇವಂತಿ... ಯಾವುದು ಬೇಕು ಯಾವುದು ಬೇಡಾ... ಸೂರ್ಯನ ಕುದುರೆಯ ಅಂಚು ಮೂಡಣ ಬೆಟ್ಟದ ತುದಿಯಲ್ಲಿ ಕೆಂಚಗೆ ಕಂಡಾಗಲಿಂದ ಹಿಡಿದು, ಅದು ಪಡುವಣದಲ್ಲಿ ಮರೆಯಾಗುವವರೆಗೆ ಸಣ್ಣಗೆ ನಗುವುದನ್ನೇ ಅಭ್ಯಾಸ ಮಾಡಿಕೊಂಡಬಿಟ್ಟವು ಆ ಹೂವುಗಳು. ಆದರೆ ಅದೇಕೋ ಏನೋ ಸೂರ್ಯ ಎಂಬ ಆ ರಣರಣ ಉರಿಯುತ್ತಿದ್ದ ಆಸಾಮಿ ಮಾತ್ರ ಆ ನಗುವಿನತ್ತ ನೋಡಲೇ ಇಲ್ಲ.
ಹೀಗೇ ಇರಬೇಕಾದ ಕಾಲದಲ್ಲಿ ಅದು ಹೇಗೋ ಆ ಮೂಡಣ ಬೆಟ್ಟದ ತುಟ್ಟತುದಿಯಲ್ಲಿ ಒಂದು ಸೂರ್ಯಕಾಂತಿ ಹೂವಿನ ಗಿಡ ಹುಟ್ಟಿಬಿಟ್ಟಿತು. ಸೂರ್ಯನಂತೆಯೇ ಬೆಂಕಿ ಬೆಳಕಿನ ಪಕಳೆಗಳು, ರಣರಣ ಕೆಂಚಿನ ಬಣ್ಣ. ಈ ಅದ್ಭುತ ನೋಡಿ ಕಣ್ಣು ಕೋರೈಸಿ ಹೋದ ಅಕ್ಕಪಕ್ಕದ ಹೂವುಗಳು 'ನೋಡಿದೇನು ಈ ವಯ್ಯಾರಾನಾ' ಅಂತ ಹೊಟ್ಟೆಉರಿ ಪಡುವುದನ್ನೇ ವೃತ್ತಿ ಮಾಡಿಕೊಂಡವು. ಮೂಡಣದಲ್ಲಿ ಸೂರ್ಯನ ಕುದುರೆ ಹುಟ್ಟಿದಾಗಲಿಂದ ಹಿಡಿದು ಪಡುವಣದಲ್ಲಿ ಮರೆಯಾಗುವವರೆಗೆ ತನ್ನ ಮೊಗವನ್ನು ಒಂದು ಕ್ಷಣ ಕೂಡಾ ಬೇರೆಡೆ ತಿರುಗಿಸುತ್ತಿದ್ದಿಲ್ಲ ಆ ಸೂರ್ಯಕಾಂತಿ. ಸೂರ್ಯನೆಲ್ಲಾದರೂ ಈ ಅದ್ಭುತ ನೋಡಿಬಿಟ್ಟರೆ ಗತಿ ಏನು ಅಂದುಕೊಂಡು ಸಂಕಟಪಟ್ಟವು ಉಳಿದ ಹೂವುಗಳು.
ಇಂಥ ಚೆಲುವನ್ನು ನೋಡದೇ ಇರಲು ಸೂರ್ಯ ಎಂಬ ರಣರಣ ಆಸಾಮಿಯೇನು ಕುರುಡನೇ? ಅವನು ನೋಡಿದ್ದ: ಇರಲಿ ನನ್ನ ಏಳು ಕುದುರೆಯ ಮೇಲೆ ಹೋಗಿ ನಾಳೆಯೇ ಹಿಡಿಯಬೇಕು ಆ ಕಾಂತಿಯನ್ನ -ಅಂದುಕೊಳ್ಳುತ್ತಿದ್ದ ದಿನವೂ. ಸೂರ್ಯಕಾಂತಿ ಸುಮ್ಮನೆ ನೋಡುತ್ತಲೇ ಇತ್ತು.
ಒಂದು, ಎರಡು, ಮೂರು... ಹೀಗೇ ಏಳು ವರ್ಷಗಳು ಕಳೆದವು. ಒಂದು ದಿನ ಬೆಳಿಗ್ಗೆ ಅದು ಹೇಗೆ ಹುಮ್ಮಸ್ಸು ಬಂತೋ ಏನೋ; ತನ್ನ ಏಳು ಕುದುರೆಯ ಮೇಲೆ ತೇಜಃಪುಂಜನಾಗಿ ಆ ರಣರಣ ಸೂರ್ಯ ಮೂಡಣ ಬೆಟ್ಟದ ತುಟ್ಟತುದಿಗೆ ಇಳಿದೇ ಬಿಟ್ಟ.
ಆದರೆ ಅಲ್ಲಿ ಸೂರ್ಯಕಾಂತಿ ಇರಲಿಲ್ಲ! ರಣರಣ ಸೂರ್ಯ ಇನ್ನೂ ಹುಡುಕುತ್ತಲೇ ಇದ್ದಾನೆ...

Friday 21 September 2007

ನವಿಲು ಗರಿ

ಕಾಲದ ಪರಿವೆಯೇ ಇಲ್ಲದೆ ಆ ಗೊಂಡಾರಣ್ಯದಲ್ಲಿ ಹಾಗೆ ನಾನು ಅಲೆದಾಡುತ್ತಿದ್ದಾಗ ಅದೆಲ್ಲಿಂದಲೋ ಒಂದು ಗರಿ ನನ್ನತ್ತಲೇ ಹಾರುತ್ತಾ ಬರತೊಡಗಿತು. ಅದು ಯಾವ ಗಿಡದ ಗರಿ? ನಿಜವಾಗಿ ಗಿಡದ್ದೋ, ಇಲ್ಲಾ ಯಾವುದಾದರೂ ಹಕ್ಕಿಯದೋ? ಹಕ್ಕಿಯದಾದರೆ ಏನು ಪಾರಿವಾಳದ್ದೇ? ಪಿಕಳಾರದ್ದೇ? ನವಿಲಿನದೇ?
...ಅದ್ಯಾವ ಗರಿಯೋ ಏನು ಕಥೆಯೋ ಅಂತೂ ಆ ಗರಿ ನನ್ನನ್ನ ಮುಟ್ಟದಿರಲಿ ಅಂತ ಓಡುತ್ತಲೇ ಹೋದೆ. ಒಂದು ಕ್ಷಣ ಸುಧಾರಿಸಿಕೊಂಡರೆ ಮತ್ತೆ ಹಿಂದೆಯೇ ಹಾರಿ ಬರುತ್ತಿತ್ತು ಗರಿ: ಮತ್ತೆ ಓಟ, ಬಿಡುವಿಲ್ಲದ ಓಟ. ಕೊಂಚ ಹೊತ್ತು ಬಿಟ್ಟು ತಿರುಗಿ ನೋಡಿದರೆ ನೂರಾರು ಗರಿಗಳು! ಅಯ್ಯೋ, ಇದೇನು ಕಾಟ? ಮತ್ತೆ ಓಟ, ಎಲ್ಲೂ ನಿಲ್ಲದ ಓಟ. ಗರಿಗಳು ಹಾರುತ್ತಾ ಬಂದೇ ಬಂದವು. ನಾನು ಓಡೇ ಓಡಿದೆ, ಹಿಂದಿರುಗಿ ನೋಡದೆ.

ಅಬ್ಬಾ ಎಂಥಾ ಸುಸ್ತು! ಒಂದು ಗವಿ ಕಂಡಿತು, ನೋಡೋಣ ಇದು ಯಾವ ಗವಿ: ಒಳಹೊಕ್ಕೆ. ನಡೆದೇ ನಡೆದೆ, ಹಿಂದಿರುಗದೆ. ಅರಿವಿಲ್ಲದೆ ಸಾಗಿದ್ದು ಪಾತಾಳಕ್ಕೆ. ಕಗ್ಗತ್ತಲೆಯಲ್ಲಿ ಗರಿಗಳ ಸುಳಿವೇ ಇಲ್ಲ. ಅಯ್ಯೋ ಈ ಗವಿಯ ಕೊನೆ ಎಲ್ಲಿ? ಹಿಂದಿರುಗುವ ಹಾದಿ ಯಾವುದು? ಯಾವುದಾದರೊಂದು ಗರಿಯಾದರೂ ಕಂಡೀತೇ? ಊಹೂಂ. ಯುಗಗಳು ಕಳೆದರೂ ಗರಿಗಳ ಸುಳಿವೇ ಇಲ್ಲ.
ಒಂದು ದಿನ ಒಮ್ಮೆಗೇ ಪ್ರಖರ ಬೆಳಕು. ಪ್ರಭೆ ಸೂಸುವ ಜ್ಯೋತಿರ್ಮಣಿ. ಅಬ್ಬಾ. ಅಂತೂ ಪಾತಾಳದಿಂದ ಹೊರಬೀಳುವ ಹಾದಿ ಕಂಡಂತಾಯಿತು. ಓಡಿ ನೋಡಿದರೆ ಪ್ರಖರ ಪ್ರಭೆ ಸೂಸುತ್ತಿತ್ತು ಒಂದು ಗರಿ, ನವಿಲು ಗರಿ!
ಈಗ ಅದೆಷ್ಟು ಯುಗಗಳು ಕಳೆದವೋ ತಿಳಿಯದು; ಓಡುತ್ತಲೇ ಇದ್ದೇನೆ ಹಿಡಿಯಲು ಆ ನವಿಲು ಗರಿ.