"ನಿಮ್ಮಲ್ಲಿ ಯಾರಿಗೂ ಬ್ಲಾಗ್ ಬರೆಯುವ ಅಭ್ಯಾಸವಿಲ್ಲವೇ" ಎಂಬ ಅಮಾಯಕ ಪ್ರಶ್ನೆಯ ಚಾಟಿಯನ್ನು ನಮ್ಮ ಹೊಸ ಸಹೋದ್ಯೋಗಿ ಕುಮಾರ್ ಹಾಗೆ ಇದ್ದಕ್ಕಿದ್ದಂತೆ ನಮ್ಮತ್ತ ಬೀಸಿ ಸ್ತಂಭೀಭೂತಗೊಳಿಸುತ್ತಾರೆ ಎಂದು ನಾವಾರೂ ನಿರೀಕ್ಷಿಸಿರಲಿಲ್ಲ. ಹಾಗೇ, ಕನ್ನಡದ ಜನಪ್ರಿಯವೂ, ಜಗದ್ವಿಖ್ಯಾತವೂ ಆದ ಬ್ಲಾಗುಗಾರ್ತಿ ತೀರಾ ಇತ್ತೀಚಿನವರೆಗೆ ನಮ್ಮ ಸಹೋದ್ಯೋಗಿಯಾಗಿದ್ದರು ಎಂಬ ಸಂಗತಿ ಅರಿಯದವರು ಇರುತ್ತಾರಲ್ಲಾ ಎಂದು ಕೂಡಾ ಖೇದವಾಗದೇ ಇರಲಿಲ್ಲ. ಹೀಗಾಗಿ ಸದರಿ ವಿಷಯವನ್ನು ಅತೀವ ಹೆಮ್ಮೆಯಿಂದ ಪ್ರಸ್ತುತಪಡಿಸದೇ ಹೋದರೆ ಕರ್ತವ್ಯಲೋಪವಾದೀತೆಂಬ ಪ್ರಜ್ಞೆಯಿಂದ ಮಾತ್ರವಲ್ಲದೆ, ಈಗ ಯಾರ ಬಗ್ಗೆ ಬರೆಯುತ್ತಿದ್ದೇನೆಯೋ ಆಕೆಯ ವಿವಾಹ ಸಂದರ್ಭದಲ್ಲೇ, ಅಂದರೆ ಮೂರು ತಿಂಗಳ ಹಿಂದೆಯೇ ಬರೆಯಬೇಕಿದ್ದ ಮತ್ತು ನನ್ನ ದೈನಂದಿನ ಸೋಮಾರಿತನದಿಂದ ಮುಂದೂಡಲಾಗಿದ್ದ ಲೇಖನವನ್ನು ಈಗಲಾದರೂ ಬರೆಯುವ ಸಾಹಸಕ್ಕೆ ಮುಂದಾಗಿದ್ದೇನೆ ಎಂದು ಈ ಮೂಲಕ ಹೃತ್ಪೂರ್ವಕವಾಗಿ ತಿಳಿಯಪಡಿಸುತ್ತೇನೆ.
ಅದೇನೆಂದರೆ, ಭಾರತ ದೇಶಕ್ಕೆ ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ಬಂದ ವರ್ಷ ಅಂದರೆ ಸನ್ 2007ನೇ ವರ್ಷದ ಶ್ರಾವಣ ಮಾಸದ ಆಜುಬಾಜಿನಲ್ಲಿ ನನ್ನ ಮೊದಲ ಮತ್ತು ಏಕೈಕ ಬ್ಲಾಗನ್ನು ಆರಂಭಿಸಿದ್ದೆನಷ್ಟೆ. 'ದೊಡ್ಡವರು ಚಿಕ್ಕವರು ಭೇದವಿಲ್ಲದೆ ಎಲ್ಲಾ ಹುಲುಮಾನವರನ್ನೂ ಅಂತರ್ಜಾಲವೆಂಬ ಮಾಯಾಂಗಿನಿ ಆವರಿಸುತ್ತಿರುವ ಪ್ರಸಕ್ತ ಕಾಲದಲ್ಲಿ ತಮ್ಮದೇ ಒಂದು ಖಾಸಾ ಬ್ಲಾಗನ್ನು ತೆರೆಯದೇ ಹೋದವರು ಮುಲಾಜಿಲ್ಲದೆ ಔಟ್ ಡೇಟೆಡ್ ಆಗುತ್ತಾರೆಂದೂ, ಅದರಲ್ಲೂ ಮೀಡಿಯಾ ಲೋಕದವರಾಗಿಯೂ ಬ್ಲಾಗ್ ಹೊಂದದೇ ಹೋದರೆ ಕೆಲಸಕ್ಕೆ ಬಾರದವರಾಗುತ್ತಾರೆ' ಎಂದೂ ಟಿವಿ9 ಶಿವಪ್ರಸಾದ ಪದೇ ಪದೇ ಬೆದರಿಕೆ ಒಡ್ಡದೇ ಹೋಗಿದ್ದಲ್ಲಿ ನವಿಲುಗರಿ ಗರಿಬಿಚ್ಚುತ್ತಿರಲಿಲ್ಲ ಎಂಬುದು ಐತಿಹಾಸಿಕ ಸತ್ಯ. ಕಷ್ಟಪಟ್ಟು ಬ್ಲಾಗು ಆರಂಭಿಸಿದ್ದೇನೋ ಆಯಿತು. ಅಷ್ಟೇ ಮುಚ್ಚಟೆಯಿಂದ ಒಂದೆರಡು ಬರಹಗಳನ್ನು ಪೋಸ್ಟು ಮಾಡಿದ್ದೂ ಆಯಿತು. 'ಬರಿದೆ ಬರೆದೇನು ಫಲ, ಕೇಳುವ ಸೂರಿಗಳಿಲ್ಲದೆ' ಎಂಬಂತೆ ಬ್ಲಾಗು ಆರಂಭಿಸಿದರೆ ಸಾಲದು ಕಾಮೆಂಟುಗಳ ಒರತೆ ಇರಬೇಕು ಎಂದು ಕೆಲ ಮಿತ್ರರು ಪದೇ ಪದೇ ಛೇಡಿಸತೊಡಗಿದರು. ಹೀಗಾಗಿ ಕಂಡ ಕಂಡ ನೆಟ್ಟಿಗರನ್ನೆಲ್ಲಾ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾಮೆಂಟು ಮಾಡುವಂತೆ ವಿನಂತಿಸಿಕೊಳ್ಳಲು ತೊಡಗಿದರೂ ಹೇಳಿಕೊಳ್ಳುವಂಥ ಬೆಳವಣಿಗೆ ಆಗಲಿಲ್ಲ. ಇದಕ್ಕೆ 'ನಾನು ವಿವಾದಾತ್ಮಕ ಖಾಸಾ ಸಂಗತಿಗಳನ್ನು ಬರೆಯದೇ ಇರುತ್ತಿದ್ದುದು ಒಂದು ಕಾರಣವಾಗಿದ್ದರೆ, ಪುರುಷನಾಗಿದ್ದುದು ಮತ್ತೊಂದು ಕಾರಣ' ಎಂದು ಕೆಲವು ಹಿತೈಷಿಗಳು ನನಗೆ ಸಮಾಧಾನ ಮಾಡಲು ಯತ್ನಿಸಿದ್ದುದೂ ಉಂಟು. ಇದೇ ಸಂದರ್ಭದಲ್ಲೇ ಶರಧಿ ಎಂಬ ಬ್ಲಾಗುಗಾರ್ತಿಯ ಚೆಂದದ ಬರಹಗಳ ಬಗ್ಗೆಯೂ, ಆ ಬರಹಗಳಿಗೆ ಸುನಾಮಿಗಿಂತಲೂ ವೇಗವಾಗಿ ಅಪ್ಪಳಿಸುವ ಅಸಂಖ್ಯಾತ ಕಾಮೆಂಟುಗಳ ಬಗ್ಗೆಯೂ, ಎಣಿಸಲು ಹೊರಟರೆ ಚೀನಾ ಜನಸಂಖ್ಯೆಯನ್ನೂ ಮೀರಿಸುವ ಆ ಬ್ಲಾಗಿನ ಫಾಲೋಯರ್ ಗಳ ಬಗ್ಗೆಯೂ ನನಗೆ ಮಾಹಿತಿ ಬಂದದ್ದು. ಈ ಶರಧಿ ಎಂಬ ಬ್ಲಾಗುಗಾರ್ತಿ ಬೇರಾರೂ ಆಗಿರದೇ ಬೆಂಗಳೂರು ಕಚೇರಿಯ ನಮ್ಮ ಸಹೋದ್ಯೋಗಿ ಎಂಬ ಸತ್ಯಾಂಶ ತಿಳಿಯಲು ತಡವಾಗಲಿಲ್ಲ. ಹೀಗಾಗಿ, ಪೋಸ್ಟು ಮಾಡಿದ ಕ್ಷಣಾರ್ಧದಲ್ಲಿ ಅದನ್ನೇ ಕಾಯುತ್ತಿದ್ದವರಂತೆ 28 ಕಾಮೆಂಟುಗಳು ಅಪ್ಪಳಿಸುವಂತೆ ಬರೆಯುವ ಬ್ಲಾಗುತಂತ್ರಗಳನ್ನು ಆಕೆಯಿಂದ ಕೇಳಿಕೊಂಡಿದ್ದೂ ತಡವಾಗಲಿಲ್ಲ. ಮತ್ತು ಬಿಡುವಾದಾಗ ನನ್ನ ಬ್ಲಾಗಿಗೂ ಕೆಲವು ಕಾಮೆಂಟುಗಳನ್ನು ಹಾಕುವಂತೆಯೂ, ತಮ್ಮ ಬ್ಲಾಗುರೋಲ್ ಪಟ್ಟಿಯಲ್ಲಿ ನನ್ನ ಬ್ಲಾಗನ್ನೂ ಸೇರಿಸಿಕೊಳ್ಳುವಂತೆಯೂ ವಿನಂತಿಸಿದ್ದು ಕೂಡಾ ತಡವಾಗಲಿಲ್ಲ. ಈ ಎಲ್ಲಾ ಕಾರ್ಯಾಚರಣೆಯ ಫಲವಾಗಿ ನನ್ನ ಬ್ಲಾಗಿಗೂ ಕೆಲವು ಕಾಮೆಂಟುಗಳು ಹರಿದುಬರತೊಡಗಿದ್ದೇ ಅಲ್ಲದೆ, ಶರಧಿಯಂಥ ಶರಧಿಯು ನನ್ನ ಪೋಸ್ಟುಗಳ ಪರ್ಮನೆಂಟ್ ಕಾಮೆಂಟುಗಾರ್ತಿಯಾದಳು.
ಒಂದು ಆಂಗಲ್ ನಿಂದ ನೋಡಿದರೆ ಒನಕೆ ಓಬವ್ವಳಂತೆಯೂ ಮತ್ತೊಂದು ಆಂಗಲ್ ನಿಂದ ನೋಡಿದರೆ ಝಾನ್ಸಿರಾಣಿ ಲಕ್ಷ್ಮಿಬಾಯಿಯಂತೆಯೂ ಕಂಗೊಳಿಸುತ್ತಿದ್ದ ಶರಧಿ ತನ್ನ ಬರವಣಿಗೆ ಮಾತ್ರವಲ್ಲದೆ, ಏಕಕಾಲದಲ್ಲಿ ಮುಗ್ಧತೆ ಮತ್ತು ವೀರಾವೇಶತನಕ್ಕೆ ಕಚೇರಿಯಾದ್ಯಂತ ಹೆಸರುವಾಸಿಯಾಗಿದ್ದಳಷ್ಟೆ. ಇಂಥ ಶರಧಿಯನ್ನು ತಿಳಿದೋ ತಿಳಿಯದೆಯೋ ಕೆಣಕಲು ಹೋಗಿ ಭೌತಿಕವಾಗಿ, ಮಾನಸಿಕವಾಗಿ ಒದೆ ತಿಂದವರ ಸಂಖ್ಯೆ ಕಡಿಮೆ ಏನೂ ಇರಲಿಲ್ಲ. ಕರಾವಳಿ ವಿಚಾರ ತೆಗೆದು ನಾನು ಕೂಡಾ ಆಗಾಗ ಆಕೆಯನ್ನು ತಮಾಷೆಗೆಂಬಂತೆ ಕೆರಳಿಸಿ ಕೋಪಾಟೋಪ ರುದ್ರಪ್ರತಾಪದ ದರ್ಶನ ಮಾಡುತ್ತಿದ್ದುದುಂಟು. ಸುದೈವವಶಾತ್ ಅವೆಲ್ಲವೂ ಮಾತಿನ ಚಕಮಕಿಯಲ್ಲೇ ಪರ್ಯಾವಸಾನಗೊಂಡು, ಹಲ್ಲೆ, ಪ್ರಹಾರ ಮುಂತಾದವುಗಳಿಗೆ ನಾನು ಈಡಾಗಲಿಲ್ಲ ಎಂಬುದನ್ನು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತೇನೆ.
ಹೀಗಿರುವಾಗಲೇ, ಒಮ್ಮೆ ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಅವರ ಸಂದರ್ಶನಕ್ಕೆ ನಾವು ತೆರಳಿದ್ದ ಸಂದರ್ಭದಲ್ಲಿ, ಕ್ಯಾಮರಾ ಆಪರೇಟ್ ವಿಧಾನವನ್ನು ಆಕೆಗೆ ಹೇಳಿಕೊಟ್ಟ ಮೇಲೆ ಕೂಡಾ ಸಚಿವರ ಫೋಟೋವನ್ನಾಗಲೀ, ಕನಿಷ್ಠ ಪಕ್ಷ ನನ್ನ ಫೋಟೋವನ್ನಾಗಲೀ ತೆಗೆಯದೆ ಟೇಬಲ್ ಮೇಲಿದ್ದ ನನ್ನ ಹೆಲ್ಮೆಟ್ ಫೋಟೋ ತೆಗೆದಿದ್ದು ಕೂಡಾ ಆಕೆಯ ಇಂಥ ಒಂದು ಕೋಪಾಟೋಪದ ಕಾರಣವೋ, ಅಮಾಯಕತೆಯೋ ಇಂದಿಗೂ ಅರ್ಥವಾಗಿಲ್ಲ. ಆದರೂ ಕಾಲ ಕಳೆದಂತೆ ಬೆಂಗಳೂರಿನ ಪ್ರತಿಷ್ಠಿತ ಏರಿಯಾವೊಂದರಲ್ಲಿ ಕಣ್ಣು ಮುಚ್ಚಿ ಬಿಡುವುದರೊಳಗಾಗಿ ಆ ನನ್ನ ಹೆಲ್ಮೆಟ್ ಕಾಣೆಯಾಗಿ ಹೋಗಿ, ಈಗ ಅದರ ಜ್ಞಾಪಕಾರ್ಥ ನನ್ನ ಬಳಿ ಇರುವುದು ಶರಧಿ ತೆಗೆದ ಆ ಫೊಟೋ ಮಾತ್ರ ಎಂಬುದು ನೆನಪಾದಾಗ ಭಲೆ ಎನಿಸುವುದೂ ಉಂಟು.
ಇರಲಿ, ಮುಖ್ಯ ವಿಚಾರಕ್ಕೆ ಬರೋಣ. ಶರಧಿಯ ವೀರಾವೇಶ ಉತ್ತುಂಗದಲ್ಲಿದ್ದ ಕಾಲದಲ್ಲೇ ಕಚೇರಿಗೆ ನಮ್ಮ ಸಾಗರದ ಕಡೆಯ ಅಮಾಯಕ ಆಕೃತಿಯೊಂದು ಪ್ರವೇಶವಾಯಿತಷ್ಟೆ. ಎಲ್ಲಾ ಸಾಗರದವರಂತೆ ತಾನು ಕೂಡಾ ಬುದ್ಧಿಜೀವಿಯಾಗಬೇಕೆಂಬ ಹಂಬಲವಿದ್ದ ಆತ ತಕ್ಕಮಟ್ಟಿಗೆ ಸಾಹಿತ್ಯಪ್ರಿಯನೂ, ಸಮಯಾಸಮಯದಲ್ಲಿ ನಿರುಪದ್ರವಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮನೂ, ಮೇಲಾಗಿ ಅಪ್ರತಿಮ ಜಿಪುಣಾಗ್ರೇಸರನೂ ಆಗಿದ್ದನು (ಈತನ ರೋಚಕವೂ, ಹಸನಪ್ರಚೋದಕವೂ ಆದ Red Bull ಕಥೆಯನ್ನು ಮತ್ತೊಮ್ಮೆ ಬೇಕಾದರೆ ಹೇಳುತ್ತೇನೆ). ಕನ್ನಡ ಮತ್ತು ಇಂಗ್ಲಿಷ್ ಉಭಯ ಭಾಷೆಗಳಲ್ಲೂ ಒಳ್ಳೆಯ ಬರವಣಿಗೆ ರೂಢಿಸಿಕೊಂಡಿದ್ದ ಆತ ಎಂದಾದರೊಮ್ಮೆ ಟ್ರಿಮ್ ಮಾಡಿದ ಗಡ್ಡ ಬಿಟ್ಟು ಅದರೊಳಗೆ ಬೆರಳು ತುರಿಸುತ್ತಾ ಥೇಟು ಅನಂತಮೂರ್ತಿಗಳ ಹಾಗೆ ಬೌದ್ಧಿಕ ನಗೆ ಒಗೆಯುತ್ತಿರಬೇಕು ಎಂಬ ಮಹತ್ವಾಕಾಂಕ್ಷೆಯನ್ನೂ ಹೊಂದಿದ್ದುದು ರಹಸ್ಯವಾಗೇನೂ ಇರಲಿಲ್ಲ. ಆದರೆ ವಿಧಿವಿಲಾಸದ ಜಾಡನ್ನರಿವರಾರ್? ಎಲ್ಲರಿಗೂ ಕೆಟ್ಟಕಾಲ ಒಂದಿರುತ್ತದೆ ಎಂಬುದು ಬರಿ ಕಲ್ಪನೆಯ ಮಾತಲ್ಲವಲ್ಲ... ಹಾಗೆ, ಒಮ್ಮೆ ತನ್ನ ಗಡ್ಡವಿಲ್ಲದ ಕೆನ್ನೆಯ ಮೇಲೆ ಬೆರಳು ತುರಿಸುತ್ತಿದ್ದ ಆತ ಸುಮ್ಮನಿರಲಾರದೆ, ಎದುರಿಗೆ ಲೀಲಾಜಾಲವಾಗಿ ಬರುತ್ತಿದ್ದ ಶರಧಿ ಮತ್ತು ನಮ್ಮ ಕಚೇರಿಯ ತೆಳುಹುಡುಗಿಯೊಬ್ಬಳನ್ನು ನೋಡಿ, '200 ಗ್ರಾಂ ಟೂಥ್ ಪೇಸ್ಟ್ ಕೊಂಡರೆ 25 ಗ್ರಾಂ ಫ್ರೀ ಅನ್ನೋ ಜಾಹಿರಾತು ನೆನಪಾಗುತ್ತದೆ' ಎಂದು ಪ್ಯಾಲಿ ನಗೆ ಸಹಿತ ಡಯಲಾಗು ಬಿಟ್ಟನಷ್ಟೆ. ಒರಟಾಗಿ ಬೀಸಿದರೆ ಗಾಳಿಯ ಮೇಲೇ ಯುದ್ಧ ಸಾರುವ ಸ್ವಭಾವದ ಶರಧಿ ತನ್ನ ಆಕೃತಿಯ ಬಗ್ಗೆ ಆಫ್ಟರ್ ಆಲ್ ಒಬ್ಬ ಅಮಾಯಕ ಹುಲುಮಾನವ ಹೀಗೆ ಲಘುವಾಗಿ ಮಾತನಾಡಿ ಸಮರ ಸಾರಿದ ಮೇಲೆ ಸುಮ್ಮನಿದ್ದಳಾದರೂ ಹೇಗೆ. ನಿಮಿಷಾರ್ಧದಲ್ಲಿ ನಖಶಿಖಾಂತ ಕೆರಳಿದ ಆಕೆ ಆತನಿಗೆ ಯಾವ ಪರಿ ಪ್ರಹಾರ ಮಾಡತೊಡಗಿದಳೆಂದರೆ, ಆ ಕ್ಷಣ ಚೀತ್ಕರಿಸಲು ಆರಂಭಿಸಿದ ಆತ ಸಮಾಧಾನದ ನಿಟ್ಟುಸಿರುಬಿಟ್ಟಿದ್ದು ವರ್ಷಕಾಲದ ನಂತರ ಶರಧಿ ಬೇರೊಂದು ಕಚೇರಿ ಸೇರಿದ ಸುದ್ದಿ ಕೇಳಿದಾಗಲಷ್ಟೇ.
ಇಂಥ ಶರಧಿ ಅಮ್ಮನ ಬಗ್ಗೆಯಾಗಲಿ, ತಮ್ಮನ ಬಗ್ಗೆಯಾಗಲಿ, ತಾನು ಹುಟ್ಟಿ ಬೆಳೆದ ಹಳ್ಳಿಗಾಡಿನ ಬಗ್ಗೆಯಾಗಲಿ ಅಷ್ಟೇ ಆಪ್ತವಾಗಿ, ಮನಕ್ಕೆ ನಾಟುವಂತೆ ಬರೆಯುವುದನ್ನು ಕರಗತ ಮಾಡಿಕೊಂಡಿರುವುದು ಕಡಿಮೆ ಸಾಧನೆಯಲ್ಲ. ಭೂಲೋಕದ ಸಕಲ ಚರಾಚರ ವಸ್ತುಗಳು ಆಕೆಯ ಬ್ಲಾಗಿನಲ್ಲಿ ಅಕ್ಷರ ರೂಪವಾಗಿ ಒಡಮೂಡಲು ಕಾಯುತ್ತಿರುವುದು ಅತಿಶಯೋಕ್ತಿಯೂ ಅಲ್ಲ. ಆಕೆಯ ಬ್ಲಾಗಿನ ಅಭಿಮಾನಿಕೋಟಿಗಳಲ್ಲೊಬ್ಬರೂ, ಸ್ವತಃ ಒಳ್ಳೆಯ ಬರಹಗಾರರೂ ಆದ ಸಂತೋಷ್ ಎಂಬ ಸಜ್ಜನ ವ್ಯಕ್ತಿಯೊಬ್ಬರು, ಬ್ಲಾಗಿನ ಮೂಲಕವೇ ಪರಿಚಯ ಮಾಡಿಕೊಂಡು ಕಾಲಕ್ರಮೇಣ ಆಕೆಯ ಕೈ ಹಿಡಿಯುವಲ್ಲಿ ಯಶಸ್ವಿಯಾದರು. ಸದಾಶಿವನಗರದಲ್ಲಿ ನಡೆದ ಅವರ ಶುಭವಿವಾಹ ಸಮಾರಂಭಕ್ಕೆ ಪರಿವಾರ ಸಮೇತರಾಗಿ ನಾವೆಲ್ಲಾ ಹೋಗಿದ್ದುದುಂಟು. ಶುಚಿರುಚಿಯಾದ ಭೋಜನ ಸೇವಿಸುತ್ತಿದ್ದಾಗ ಸಾಗರದ ಸಾಹಿತ್ಯಪ್ರಿಯ ತಾನು ತಿಂದ ಹೊಡೆತಗಳ ನೆನಪನ್ನು ಪ್ಯಾಲಿ ನಗೆ ಸೂಸುತ್ತಾ ಹೊರಹಾಕಿದ್ದುದೂ ಉಂಟು. ಆಗಲೇ ಇಂಥದೊಂದು ಲೇಖನ ಬರೆಯಬೇಕೆಂದು ನಾನು ಧೈರ್ಯ ಮಾಡಿದ್ದು. ನಂತರದಲ್ಲಿ ಚಾಟಿನಲ್ಲೋ, ಫೋನಿನಲ್ಲೋ ಆಗಾಗ್ಗೆ ಸಿಕ್ಕಾಗ, 'ನಾನು ಆ ಕಚೇರಿ ಬಿಟ್ಟೆ ಎಂತ ಅನಿಸೋದೇ ಇಲ್ಲ ಸರ್, ನಿಮ್ಮೆಲ್ಲರ ಜೊತೆ ಈಗಲೂ ಇದ್ದೇನೆ ಎಂತಲೇ ಅನ್ನಿಸುತ್ತೆ' ಎಂದು ಶರಧಿ ಆಪ್ತವಾಗಿ ಬೆದರಿಕೆ ಹಾಕುವುದುಂಟು!
ಉಪಸಂಹಾರ: ಪ್ರಸ್ತುತ ತೆಳುಹುಡುಗಿಯನ್ನು ಈಗ 40 ಗ್ರಾಂ ಎನ್ನಲಡ್ಡಿಯಿಲ್ಲ. ಕುಮಾರ್ ಈಗ ಶರಧಿ ಬ್ಲಾಗಿನ ಹೊಸ ಅಭಿಮಾನಿ. ಶುಭವಿವಾಹದ ನಂತರ ಶರಧಿಗೆ ಬರುವ ಕಾಮೆಂಟುಗಳ ಸಂಖ್ಯೆಯಲ್ಲಿ ಇಳಿಮುಖ ಆಗಿದೆಯಂತೆ. ಕೊನೆಯದಾಗಿ, ಈ ಪೋಸ್ಟ್ ನ್ನು ನೋಡಿದ, ಓದಿದ, ಓದಿಸಿ ಕೇಳಿದ, ಕಾಮೆಂಟು ಹಾಕಿದ ಬ್ಲಾಗುಪ್ರಿಯರ ಸಿಸ್ಟಮ್ ಗಳು ವೈರಸ್ ಬಾಧೆಯಿಂದ ಮುಕ್ತವಾಗುತ್ತವೆ; ಮಹಿಳಾ ಲೇಖಕಿಯರ ಪರಿಚಯ ಯೋಗ ಶೀಘ್ರ ಒದಗುವುದೂ ಸೇರಿದಂತೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬಲ್ಲಿಗೆ ಜಯ ಮಂಗಳಂ ನಿತ್ಯ ಶುಭಮಂಗಳಂ!