Friday 6 March 2009

ಗಾಂಧೀಜಿಯನ್ನು ನಾವು ಎಂದೋ ಹರಾಜು ಹಾಕಿಬಿಟ್ಟಿದ್ದೇವೆ!

ಮಹಾತ್ಮ ಗಾಂಧಿ ಬಳಸಿದ್ದೆಂದು ಹೇಳಲಾದ ಕೆಲ ವಸ್ತುಗಳ ಹರಾಜು ಪ್ರಕರಣ ಅದೇಕೆ ಅಷ್ಟು ಮಹತ್ವ, ಪ್ರಚಾರ ಪಡೆಯಿತೋ ತಿಳಿಯುತ್ತಿಲ್ಲ. ಮಹಾತ್ಮ ಗಾಂಧಿ ಅವರು ಬಳಸಿದ ಬಟ್ಟಲು, ಚಮಚ, ಗಡಿಯಾರ, ಕನ್ನಡಕ, ಚಪ್ಪಲಿ ಇತ್ಯಾದಿಗಳನ್ನು ಜೇಮ್ಸ್ ಓಟಿಸ್ ಎಂಬಾತ ನ್ಯೂಯಾರ್ಕ್ ನಲ್ಲಿ ಹರಾಜು ಹಾಕುವುದಾಗಿ ಹೇಳಿದ. ಆಗಲೇ ಆ ವಸ್ತುಗಳನ್ನು ಪಡೆದುಕೊಳ್ಳಲು ಭಾರತ ಸರ್ಕಾರ ಪ್ರಯತ್ನಿಸಬೇಕಾದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. (ಅಸಲಿಗೆ ಆ ವಸ್ತುಗಳು ಮಹಾತ್ಮ ಗಾಂಧಿಯದೋ, ಅಲ್ಲವೋ ಎಂಬುದೇ ನಿಶ್ಚಿತವಾಗಿಲ್ಲ. ಹಳೇ ಚಪ್ಪಲಿಯನ್ನು ಕಾಣಿಕೆ ನೀಡುವ ಸಂಪ್ರದಾಯ ನಮ್ಮದಲ್ಲ!).
ಅದಿರಲಿ. ಗಾಂಧೀಜಿ ತಮ್ಮ ಹಲವಾರು ಪ್ರೀತಿ ಪಾತ್ರರಿಗೆ ಅಂತಹ ಕೆಲವು ಕಾಣಿಕೆ ಕೊಡುತ್ತಿದ್ದುದು ನಿಜ. ಹಾಗೆ ಕಾಣಿಕೆ ಪಡೆದವರು ಮತ್ತವರ ವಂಶಜರಿಗೆ ಗಾಂಧಿ ಮೇಲೆ ಅಭಿಮಾನವಿದ್ದಲ್ಲಿ ಅವರು ಖಂಡಿತಾ ಹಣಕ್ಕಾಗಿ ಆ ವಸ್ತುಗಳನ್ನು ಹರಾಜು ಹಾಕಲಾರರು. ಹಾಗೆ ಹರಾಜು ಹಾಕಿದ್ದೇ ಆದಲ್ಲಿ, ಅಂಥವರ ಬಳಿ ಇದ್ದ ಆ ವಸ್ತುಗಳನ್ನು ನಾವು ಸಂಗ್ರಹಿಸಿಟ್ಟುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಆ ವಸ್ತುಗಳನ್ನು ಹರಾಜು ಹಾಕದೆ ಭಾರತಕ್ಕೆ ಹಿಂದಿರುಗಿಸಬೇಕು ಎಂಬ ಮನವಿಗೆ ಓಟಿಸ್ ಎಂಥಾ ಶರತ್ತು ಹಾಕಿದ ನೋಡಿ: 'ಭಾರತ ತನ್ನ ಬಜೆಟ್ ನಲ್ಲಿ ಬಡವರ ಯೋಗಕ್ಷೇಮಕ್ಕೆ ಹೆಚ್ಚು ಹಣ ಮೀಸಲಿಡಬೇಕು' ಎಂದ. ಇದು ಭಾರತಕ್ಕೆ ಇನ್ನಷ್ಟು ಮುಜಗರ ಉಂಟು ಮಾಡಿತು. ಬಡವರ ಬಗ್ಗೆ ಕಾಗದದ ಮೇಲೆ ಏನೆಲ್ಲಾ ಬೊಂಬಡಿ ಹೊಡೆದರೂ, ಭ್ರಷ್ಟ ಕಾರ್ಯಾಂಗ ಮಧ್ಯವರ್ತಿಗಳ ಲಾಬಿಯನ್ನು ಪೋಷಿಸುತ್ತಲೇ ಬಂದಿರುವ ನಮಗೆ ಇಂಥ ಮುಜಗರ ಆಗಬೇಕಾದ್ದೇ.
ಮಹಾತ್ಮನ ಸ್ಮಾರಕಗಳು ಯಾವುದೋ ದೇಶದಲ್ಲಿ ಹರಾಜಾಗುತ್ತಿದ್ದರೆ ಬೊಬ್ಬೆ ಹೊಡೆಯುವ ನಾವು ಆ ಮಹಾತ್ಮನನ್ನೇ ಯಾವಾಗಲೋ ಹರಾಜು ಹಾಕಿಬಿಟ್ಟಿದ್ದೇವೆ. ಕಂಡಕಂಡಲ್ಲಿ ಗಾಂಧಿ ಪ್ರತಿಮೆಗಳನ್ನು ನಿಲ್ಲಿಸುವುದು, ರಸ್ತೆ, ನಗರಗಳಿಗೆ ಗಾಂಧಿ ಹೆಸರಿಡುವುದೇ ಮಹಾತ್ಮನಿಗೆ ಸಲ್ಲಿಸುವ ಗೌರವ ಎಂಬ ಮೌಢ್ಯದಲ್ಲಿರುವ ನಮಗೆ ಗಾಂಧಿ ತತ್ವಗಳಾವುವೂ ನೆನಪಿಲ್ಲ. 'ಈಚೆಗೆ ಲಗೇ ರಹೋ ಮುನ್ನಾ ಭಾಯ್' ಎಂಬ ಕಮರ್ಷಿಯಲ್ ಸಿನಿಮಾದ ಸಂದರ್ಭ ಬಿಟ್ಟರೆ, ಆಧುನಿಕ ಭಾರತ ಗಾಂಧಿ ಬಗ್ಗೆ ಗಂಭೀರ ಚರ್ಚೆ ಮಾಡಿದ ಉದಾಹರಣೆಯೇ ಇಲ್ಲ.
ಹಾಗೆ ನೋಡಿದರೆ, ಈ ನೆಲದ ಮಹಾಮಹಿಮರ ನೆನಪು ಕೊಡುವ ವಸ್ತುಗಳು, ಸ್ಮಾರಕಗಳ ಬಗ್ಗೆ ನಿಜವಾಗಿ ನಮಗೆ ಆದರ ಇಲ್ಲವೇ ಇಲ್ಲ. ರವೀಂದ್ರನಾಥ ಠಾಕೂರರ ನೋಬೆಲ್ ಪದಕವನ್ನು ಮುತವರ್ಜಿಯಿಂದ ಕಾಪಾಡಿಕೊಳ್ಳಲೂ ನಮಗೆ ಸಾಧ್ಯವಾಗಲಿಲ್ಲ. ಮಹಾ ಮಹಿಮರ ಸ್ಮಾರಕಗಳನ್ನು ಧರ್ಮ, ಮತ-ಪಂಥಗಳ ಹೆಸರಿನಲ್ಲಿ ನಾವು ಹಾಳು ಮಾಡಿಬಿಡುತ್ತೇವೆ ಅಥವಾ ಕಣ್ಣ ಮುಂದೆ ಹಾಳಾಗುತ್ತಿದ್ದರೂ ಜಾಣಕುರುಡು ಪ್ರದರ್ಶಿಸಿಬಿಡುತ್ತೇವೆ. ಇಲ್ಲವೇ ಅಂಥವುಗಳನ್ನು 'ಕಮರ್ಷಿಯಲ್ ಸೆಂಟರ್'ಗಳಾಗಿ ಪರಿವರ್ತಿಸಿ ಜೀವನೋಪಾಯಕ್ಕೆ ಒಂದು ದಾರಿ ಮಾಡಿಕೊಂಡುಬಿಡುತ್ತೇವೆ.
ಗಾಂಧೀಜಿ ಮೇಲೆ ನಿಜಕ್ಕೂ ನಮಗೆ ಅಭಿಮಾನವಿದ್ದಲ್ಲಿ ನಾವು ಸತ್ಯ, ಸರಳತೆ, ಸಹೋದರತ್ವ, ಅಹಿಂಸೆಯಂತಹ ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳಬೇಕಲ್ಲವೇ? ಅದು ಬಿಟ್ಟು ನಿರ್ಜೀವ ವಸ್ತುಗಳನ್ನು ಸಂಗ್ರಹಿಸಿಕೊಳ್ಳುವ ಹುಚ್ಚು ಅಭಿಮಾನ ಏಕೆ?
ವಿಪರ್ಯಾಸ ಏನು ಗೊತ್ತೆ? 'ಮದ್ಯಪಾನ ಮಹಾ ಪಾಪ' ಎಂದ ಆ ಮಹಾತ್ಮನ ವಸ್ತುಗಳು ಕೊನೆಗೂ ನ್ಯೂಯಾರ್ಕ್ ನ ಹರಾಜು ಕಟ್ಟೆಯಿಂದ ಭಾರತಕ್ಕೆ ಬಂದಿದ್ದು ಲಿಕ್ಕರ್ ಹಣದಿಂದ!