Wednesday 26 January 2011

ಮಂಗನ ಸಂಗ, ಅಭಿಮಾನ ಭಂಗ

ಹೀಗೊಂದು ಆಧುನಿಕ ವೃತ್ತಾಂತವು...

(ಟೀಕಾಚಾರ್ಯರ ಒತ್ತಾಯದ ಮೇರೆಗೆ ಪರಿಷ್ಕರಿಸಲಾಗಿದೆ)


ಒಂದು ಊರಿನಲ್ಲಿ ದಂಡ-ಕಮಂಡಲ ಇಲ್ಲದ ಒಬ್ಬ ತರುಣ ಋಷಿಮುನಿ ಇದ್ದನಂತೆ. "ಏನ್ ಸುಮ್ಮನೆ ಇದ್ದೀಯ? `ಅಲ್ಪನ ಸಂಗ-ಅಭಿಮಾನ ಭಂಗ' ಎಂಬ ಗಾದೆಮಾತಿನ ಸಾರ ತಿಳಿದು ಬಾ. ಅದೇ ನಿನ್ನ ತಪಸ್ಸಾಧನೆ" ಅಂತ ಗುರುಮುನಿ ಗದರಿದ್ದೇ ತಡ ವೇಷ ಮರೆಸಿಕೊಂಡು ಹೊರಟೇಬಿಟ್ಟ ದೇಶಾಂತರ ಋಷಿಮುನಿ.

ಗೊತ್ತುಗುರಿ ಇಲ್ಲದ ಊರಿನ ಚೌಕಕ್ಕೆ ಹೋದರೆ, ಅಲ್ಲಿ ಮಂಗಣ್ಣನೊಬ್ಬ ಕನ್ನಡಕ ಸರಿ ಮಾಡಿಕೊಳ್ಳುತ್ತಾ, ದಾರಿಹೋಕರನ್ನು ಚಿಟಿಕೆ ಹೊಡೆದು ಕರೆಯುತ್ತಾ, "ರೀ ಮಿಸ್ಟರ್, ನಾನು ಲಂಡನ್ಗೆ ಹೋಗಿ ಬಂದಿದೀನಿ ಗೊತ್ತಾ? ಏನ್ ತಿಳ್ಕಂಡಿದೀರಿ ನನ್ನ..." ಎಂದು ಗಾಳಿ ಬಿಡುತ್ತಿದ್ದುದು ಕಂಡಿತು.

ಸದರಿ ಮಂಗಣ್ಣನ ಪೂರ್ವಾಶ್ರಮದ ಬಗ್ಗೆ ಹೇಳುವುದಾದರೆ: ನಿಮಿಷಕ್ಕೆ ಸರಾಸರಿ 28 ಸುಳ್ಳು ಹೇಳುವ ಕಲೆಯನ್ನು ಈತ ಕಲಿತದ್ದು ಚಿಕ್ಕಂದಿನಲ್ಲೇ ಆದರೂ, ಚಿಟಿಕೆ ಹೊಡೆದು ಕರೆಯುವ ಕೌಶಲ್ಯ ರೂಢಿಸಿಕೊಂಡಿದ್ದು ಮಾತ್ರ ತಟ್ಟೆ-ಲೋಟ ತೊಳೆಯುತ್ತಿದ್ದ ದಿನಗಳಲ್ಲಿ. ಒಮ್ಮೆ ಅಮಾಯಕ ಹುಂಜವೊಂದು ಕಂಡಿದ್ದೇ ತಡ ಲಬಕ್ಕನೆ ಚಿಟಿಕೆ ಹೊಡೆಯುತ್ತಾ, ನಿರುಪದ್ರವಿ ಊರೊಂದಕ್ಕೆ ನುಗ್ಗಿದ ಆತ "ನೋಡ್ರಿ ದಿನ ಬೆಳಗಾದರೆ ಸೂರ್ಯ ಹುಟ್ಟೋದೆ ನನ್ನ ಹುಂಜ ಕೂಗೋದರಿಂದ" ಅಂತ ನಂಬಿಸಿ ವಂತಿಗೆ ವಸೂಲಿ ಮಾಡುತ್ತಿದ್ದನಂತೆ. ಇವನ ರಿಕಿರಿಕಿ ತಾಳದೆ ಪಾಪ ಹುಂಜ ಕಣ್ಮುಚ್ಚಿತು. ಆಮೇಲೆ ಕೂಡಾ ಸೂರ್ಯ ಹುಟ್ಟುತ್ತಲೇ ಇದ್ದನಲ್ಲಾ? ಆಗ ಮತ್ತೊಂದು ಐಡಿಯಾ ಮಾಡಿದ ಆತ, "ಏನು ತಿಳ್ಕಂಡಿದೀರಿ? ನನ್ಹುಂಜ ಇಲ್ದೇ ಇರುವಾಗ ಕೂಡಾ ಹುಟ್ಟೋ ಥರ ಸೂರ್ಯಂಗೆ ಟ್ರೈನಿಂಗ್ ಕೊಟ್ಟಿದ್ದೇ ನಾನು. ಕೊಡ್ರಿ ಟ್ರೈನಿಂಗ್ ಫೀಜು..." ಎಂದು ವಸೂಲಿ ಮುಂದುವರಿಸಿದನಂತೆ.

ಇಂಥಾ ಖ್ಯಾತಿಯ ಮಂಗಣ್ಣ, ಕೈಕಟ್ಟಿ ನಿಂತಿದ್ದ ಮಾರುವೇಷದ ಮುನಿಯನ್ನು ಕಂಡಿದ್ದೇ ತಡ ಚಿಟಿಕೆ ಹೊಡೆಯುತ್ತಾ, "ಅಂಗಣ್ಣಾ, ಹಿಂಗಣ್ಣಾ ನನ್ ಜೊತೆ ಬರ್ರಣ್ಣಾ... ಅರಮನೆ ಕುದುರೆ ಮೇಯ್ಸಣಾ... ಕೈತುಂಬಾ ಕೊಡುಸ್ತೀನಿ ಝಣ್ ಝಣಾ... ನಾನ್ಯಾರ್ ಗೊತ್ತಲ್ಲಾ, ಲಂಡನ್ ಮಂಗಣ್ಣಾ..." ಎಂದು ಬಲೂನು ಊದತೊಡಗಿದ. `ಇದೊಳ್ಳೆ ತಮಾಷೆ ಐತಲ್ಲಾ. ಸರಿ, ನೋಡೇ ಬಿಡೋಣ ನಡಿ' ಅಂತ ಋಷಿಮುನಿ ಸುಮ್ಮನಿರದೆ ಅತ್ತ ಹೆಜ್ಜೆ ಹಾಕಿ, ಹಗಲು-ರಾತ್ರಿ ಪಿಳ್ಳಂಗೋವಿ ಊದುತ್ತಾ ಕುದುರೆ ಮೇಯ್ಸತೊಡಗಿದನೋ ಇಲ್ಲವೋ...

ಇತ್ತ ಕತ್ತೆ-ಕುದುರೆ ಭೇದವಿಲ್ಲದೆ ಎಲ್ಲಿ ಸಿಕ್ಕಿದರಲ್ಲಿ `ಲಂಡನ್ ಮಂಗಣ್, ಲಂಡನ್ ಮಂಗಣ್...' ಅಂತ ತನ್ನದೇ ಹೆಸರಿನ ಶಿಲಾಶಾಸನ ಕೆತ್ತಲು ಶುರು ಮಾಡಿದ ಮಂಗಣ್ಣ, ನಡುನಡುವೆ ಕೆತ್ತೋದು ನಿಲ್ಲಿಸಿ,

ನನ್ ಹತ್ರ ತಲೆ ಬಗ್ಸುದ್ರೆ

ಕತ್ತೇನ್ ಮಾಡ್ತೀನಿ ಕುದ್ರೆ,

ನನ್ಗೇನಾರ ಝಾಡ್ಸುದ್ರೆ

ಕುದ್ರೇನ್ ಮಾಡ್ತೀನಿ ಕತ್ತೆ

ಅಂತ ಗಲ್ಲ ಕೆರೆದುಕೊಳ್ಳುತ್ತಾ ಇಕಿಲತೊಡಗಿದ.

ಆನಂತರ, ತನ್ನ ಖಾಸಾ ಮಾರ್ಗದ ಮುಖೇನ ಸಾಲುಸಾಲಾಗಿ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದ ಮಂಗಣ್ಣ, ದಿನಬೆಳಗಾದರೆ ಎಲ್ರನ್ನೂ ಎದುರುಗಡೆ ಕೂಡ್ರಿಸಿಕೊಂಡು, "ಏನ್ ಹಂಗ್ ಕಣ್ ಬಿಡ್ತೀರಿ? ಏಳೇಳ್ ಜಲ್ಮ ಎತ್ತಿದ್ರೂ ನೀವಾರೂ ನನ್ ಥರ ಕುದ್ರೆ ಎಣಿಸಾಕಿಲ್ಲ, ಕತ್ತೆ ಮೇಯ್ಸಾಕಿಲ್ಲ... ಅಲ್ ಪಿಳ್ಳಂಗೋವಿ ಊದ್ತಾವ್ನಲ್ಲಾ ಅವ್ನೂ ನನ್ನಷ್ಟು ಫೇಮಸ್ಸಲ್ಲ ಗೊತ್ರಾ? ಕತ್ತೆ ಮೇಸೋದ್ರಲ್ಲಿ ಯಾರೂ ನನ್ನನ್ನ ಮೀರ್ಸದಿಲ್ಲಾ, ತಿಳೀತಾ? ನಾನ್ ಕಡಿದು ಗುಡ್ಡೆ ಹಾಕಿರಾದು ಹೇಳೋಕೆ ಹೋದ್ರೆ ಎಷ್ಟು ದಿನ ಬೇಕು ಗೊತ್ತೇ? ಅದು ಬಿಡ್ರಿ, ಮಂತ್ರಿ-ಮಹೋದಯರುಗಳು ನನ್ ಎಡಗಡೆ ಭುಜದ ಮೇಲೆ ಕೈ ಮಡಗವ್ರೇ;ಇತಿಹಾಸಕಾರರೆಲ್ಲಾ ನನ್ ಬಲಗಡೆ ಭುಜದ ಮೇಲೆ ಕೈ ಮಡಗವ್ರೇ; ಡೆರೆಕ್ಟರು, ಎಡಿಟರ್ ಗಳೆಲ್ಲಾ ನಂಗೆ ಕಾರಲ್ಲಿ ಬಂದ್ ಡ್ರಾಪ್ ಕೊಟ್ ಹೋಯ್ತರೆ. ಈಗ್ಲಾದ್ರೂ ಗೊತ್ತಾಯ್ತಾ ನಾನ್ ಎಷ್ಟು ಫೇಮಸ್ಸು? ಅದಿರ್ಲಿ. 'ಸಾ ನಮ್ ಕುರಿ ಮೇಯ್ಸ್ ಕೊಡಿ, ಸಾ ನಮ್ ಕತ್ತೆ ಮೇಯ್ಸ್ ಕೊಡಿ' ಅಂತ ಡೈಲಿ ಫೋನ್ ಮೇಲೆ ಫೋನು. ನಾನೇ ಹೋಗಿಲ್ಲ. ಈ ಕಮಿಂಟ್ ಮೆಂಟ್ ಇದೆಯೇನ್ರಿ ನಿಮಗೆ?..." ಎಂದು ಸಾಧು ಕಿಲಕಿಲ ಶೈಲಿಯಲ್ಲಿ ಪರಾಕು ಹಾಕಿಕೊಳ್ಳುವುದು ಈತನ ನಿತ್ಯಕರ್ಮವಾಯಿತು.

ದೇಶಾವರಿಯಂತೆ ದಳಪತಿಗಳು ಹುಲ್ಲುಗಾವಲು ಕಡೆ ಬಂದಾಗಲೆಲ್ಲಾ, ಕಾಲರ್ ಸರಿ ಮಾಡಿಕೊಳ್ತಾ ಎದ್ದು ನಿಲ್ತಿದ್ದ ಐನಾತಿ ಮಂಗಣ್ಣ, "ನಾನ್ ಏನ್ ಚೆನ್ನಾಗಿ ಕುದ್ರೆ ಮೇಯ್ಸತಾ ಇವ್ನಿ, ಏನ್ ಕತೆ. ನೋಡ್ರಿ, ಕುದ್ರೆ ಮೈಯಾದಿ ಮೈತುಂಬಾ ನನ್ ಹೆಸ್ರೇ ತುಂಬೋಗವೆ..." ಅಂತ ಸದರಿ ದಳಪತಿಗಳ ಕಿವಿಗೆ ದಾಸವಾಳ ಮುಡಿಸಿ; ಹಣೆ ಒರಸಿ ನಾಮ ಎಳೆಯುತ್ತಿದ್ದ. ಅಷ್ಟಕ್ಕೂ ಬಿಡದೆ, "ಕುದ್ರೆ ಮೇಯ್ಸಕೆ ನಾನ್ ಅಲ್ಲಿಗೋದೆ, ಇಲ್ಲಿಗ್ ಬಂದೆ; ಎಷ್ಟು ಓಡಾಡ್ಬುಟ್ಟೆ ಏನ್ ಕತೆ... ತೆಗೀರಿ ಟಿಎಡಿಎ ದುಡ್ಡು..." ಅಂತ ಸುಲಿಯತೊಡಗಿದ.

ಒಮ್ಮೆ ಇದ್ದಕ್ಕಿದ್ದಂತೆ ಚಿಂತೆಗೀಡಾದ ಮಂಗಣ್ಣ, 'ತಾನು ಇಷ್ಟೆಲ್ಲಾ ಫೇಮಸ್ಸು ಅಂತ ಬಾಯಿ ಹರಿದುಕೊಂಡು ಹೇಳ್ತಾ ಇದ್ರೂ ಸುಮ್ಕವಲ್ಲಾ ಹೆಣ್ಮಕ್ಳು, ಅಕಟಕಟಾ...' ಎಂದು ಹಣೆ ಬಡಿದುಕೊಂಡವನೇ ತುರ್ತಾಗಿ ಸ್ಟಾಂಡಿಂಗ್ ಕಮಿಟಿ ಮೀಟಿಂಗು ಕರೆದು: "ಏನ್ ತಿಳ್ಕಂಡಿದೀರಿ? ಸವರವ ಗಂಗೂಲಿ ಲಂಡನ್ ಮೈದಾನದಗೆ ಅಂಗಿ ಕಳಚಿ ರಗರಗ ತಿರುಗಿಸ್ತಿದ್ದನಲ್ಲಾ, ಆಗ ಹಿಂದಗಡೆ ದಪ್ಪಗೆ-ಕಪ್ಪಗೆ ನಿಂತಿದ್ದೋರು ಯಾರು? ನಾನೇ! ನಂಗೆ ಖಾವಂದರು ಕ್ಲೋಜು, ರೈ ಕ್ಲೋಜು, ಬಿಲ್ ಕುಲ್ ಕ್ಲಿಂಟನ್ ಭಾರಿ ಕ್ಲೋಜು. ರಾಜ್ದೀಪ್ ಸರ್ದೇಸಾಯಿಗೆ ಮೆಸೇಜ್ ಹಾಕಬಲ್ಲೆ, ರೇಣುಕಾಚಾರಿಗೆ ರಿಂಗ್ ಕೊಡಬಲ್ಲೆ... ಅದು ಬಿಡ್ರಿ. ದೊಡ್ದೊಡ್ಡೋರೆಲ್ಲಾ ನನ್ ನೋಡಿದ್ರೆ ಪ್ಯಾಂಟಗೆ ಎಲ್ಲಾ ಮಾಡ್ಕತಾರೆ, ಅಷ್ಟು ಭಯ ಮಡ್ಗಿದೀನಿ. ನನ್ ತಲೆ ಜ್ಞಾನದ ಕೊಪ್ಪರಿಕೆ, ನಾನ್ ಹೇಳ್ದಂಗ್ ಎಲ್ಲಾ ಕೇಳಿದ್ರೆ ಓಕೆ, ಇಲ್ದಿದ್ರೆ ಜೋಕೆ... ನಿಮ್ನೆಲ್ಲಾ ಸಾಲಾಗ್ ಕರಕೊಂಡ್ ಬಂದವನೇ ನಾನ್ ತಾನೆ? ನನ್ನನ್ನ ಎದಿರು ಹಾಕ್ಕಂಡ್ರೋ ಬೆಂಗ್ಳೂರಲ್ಲಿ ಓಡಾಡದ ಹಾಗೆ ಮಾಡಿಬಿಡ್ತೀನಿ, ಖಬರ್ದಾರ್..." ಎಂದು ಒಂದೇ ಸಮನೆ ಧಮಕಿ ಹಾಕಿದ. ಅಷ್ಟಕ್ಕೂ ಬಿಡದೆ:

ನಾನ್ ಕಪ್ ಕುದ್ರೇನ್ ಬಿಳಿ ಅಂದ್ರೆ

ಒಪ್ಬೇಕು ನೀವೆಲ್ಲಾ

ಬಿಳಿ ಕುದ್ರೇನ್ ಕಪ್ ಅಂದ್ರೂ

ತೆಪ್ಗಿರಬೇಕ್ ನೀವೆಲ್ಲಾ...

ಯಾಕಂದ್ರೆ ನಾನ್ ಪ್ರಶ್ನಾತೀತ... ಪ್ರಶ್ನಾತೀತಾ...

ಎಂದು ಥೇಟು ಜಾವೆದ್ ಮಿಯಾಂದಾದ್ ಸ್ಟೈಲಿನಲ್ಲಿ ಕುಪ್ಪಳಿಸತೊಡಗಿದ.

ಪ್ರಕಾರವಾಗಿ ಕಾಲ ಸರಿಯುತ್ತಿರುವಾಗ ಏನೋ ನೆನಪಾದಂತೆ ಬೆಚ್ಚಿ ಬಿದ್ದ ಆತ: 'ತಾನು ರೆಸ್ಟ್ ತಗೊಳ್ಳೋ ಟೇಮಲ್ಲಿ ಹುಲ್ಲುಗಾವ್ಲಲ್ಲಿ ಏನಾಗ್ತದೋ ಏನ್ಕತೆಯೋ? ಇಲ್ಲೀವರೆಗೆ ಊದಿದ್ ಬಲೂನಿಗೆ ಯಾವಾಗ ಯಾರ್ ಸೂಜಿ ಚುಚ್ತಾರೋ ಏನ್ಕತೆಯೋ...' ಅಂತ ಆತಂಕ ಮೂಡಿದ್ದೇ ತಡ, ನಂಬಿಕಸ್ಥ ಬಾಲಿಕೆಯೊಬ್ಬಳಿಗೆ ಗುಪ್ತಚರ ಕೆಲಸ ವಹಿಸಿದ. ಟೈಂ ಟು ಟೈಂ ವರದಿ ತರಿಸಿಕೊಂಡು ಅದಕ್ಕನುಸಾರ ರಿಕಿರಿಕಿ ಕೊಡುವ ಹೊಸ ವರಸೆ ಶುರುಮಾಡಿ, 'ಭಲಲೈ ಸಾರಥಿ' ಎಂದು ಬೆನ್ನು ಚಪ್ಪರಿಸಿಕೊಳ್ಳತೊಡಗಿದ.

ಹೀಗೆ ಮಂಗಣ್ಣ ತಟ್ಟಿಕೊಳ್ಳುವ ಬೆನ್ನಿನ ರಭಸಕ್ಕೆ ಬೆಚ್ಚಿ ಕೆಲವರು ಜಾಗ ಖಾಲಿ ಮಾಡಿದರೆ; ರಿಕಿರಿಕಿ ತಾಳದೆ ಪೇರಿ ಕಿತ್ತವರು ಮತ್ತೆ ಹಲವರು.

ಇಷ್ಟೆಲ್ಲವನ್ನೂ ನೋಡುವವರೆಗೆ ನೋಡಿದ ಋಷಿಮುನಿ, ಪಿಳ್ಳಂಗೋವಿ ಪಕ್ಕಕ್ಕಿಟ್ಟು, ಒಮ್ಮೆ ನಿಟ್ಟುಸಿರು ಬಿಟ್ಟು, ಸುಮ್ಮನೆ ಒಂದು ಕುದುರೆ ಕಿವಿ ಹಿಂಡಿದ ಅಷ್ಟೇ.ಅದೊಮ್ಮೆ ಕೆನಲಿ ಹಿಂಗಾಲು ಝಾಡಿಸಿ ಒದ್ದ ರಭಸಕ್ಕೆ ಕುಂಯ್ ಅಂತಾ ಠುಸ್ಸಾಯಿತು ಬಲೂನು.

ಸದ್ದು ಕೇಳಿ ಬಂದ ದಳಪತಿ ಎಲ್ಲವನ್ನೂ ಗ್ರಹಿಸಿ ತಬ್ಬಿಬ್ಬಾಗಿ, "ಒಂದು ಬಲೂನು ಚುಚ್ಚೋಕೆ ಇಷ್ಟು ದಿನ ಬೇಕಾಯ್ತಾ ನಿನಗೆ...? ಸರಿ ನಡೀ ಇನ್ನ" ಎಂದು ಗದರಿದ. ಚೌಕ ಕೊಡವಿಕೊಂಡು ಎದ್ದ ಋಷಿಮುನಿ, ಅರಿವಾದ ಗಾದೆಮಾತಿನ ಸಾರದ ಚಿಂತನೆಯಲ್ಲಿ ತೊಡಗಿ, ಮರುಕ್ಷಣವೇ ಗುಪ್ತಚರ ವಿಭಾಗದ ಪರಿಸ್ಥಿತಿಗೆ ಮರುಗಿ, ಓಲೆಗರಿಯೊಂದನ್ನು ಹಿರಿದು:

ತೆಳು ಹುಡುಗಿಯು

ಬಿಳಿ ಬೆಡಗಿಯು

ತಳಹಿಡಿದಳು ಏತಕೆ?

ಖಳ ದುರುಳನ

ಬಳಿ ಸಾರುತ

ಕಳಕೊಂಡಳು ಸ್ವಂತಿಕೆ...

ಎಂಬ ಷಟ್ಪದಿ ಹೊಸೆದವನೇ ಹೊಸ ದೇಶಾಂತರಕ್ಕೆ ಹೆಜ್ಜೆ ಹಾಕಿದ...

ಇತ್ತ ಗಲ್ಲ ಕೆರೆದುಕೊಳ್ಳುವ ಮಂಗಣ್ಣನನ್ನು ಯಾರಾದರೂ, "ಇದೇನ್ರೀ ಮಂಗೀಶ್, ಬಲೂನು ಠುಸ್ಸಾಗಿದೆ?" ಎಂದು ಪ್ರಶ್ನಿಸಿದಲ್ಲಿ;

"ಹಿಹ್ಹಿಹ್ಹಿ, ಹಾಗೇನಿಲ್ಲ.ಹೆಚ್ಚಿನ ಪಕ್ಷ ನಾನೇ ಗಾಳಿಬಿಟ್ಟದ್ದು... ಅಂದಹಾಗೆ ಯು ನೋ, ಕಾಲದಲ್ಲಿ ಯಾರನ್ನೂ ನಂಬೋಹಾಗಿಲ್ಲ..." ಎನ್ನುತ್ತಾ ಹೊಸ ಬಲೂನು ಊದತೊಡಗಿದನಂತೆ.

"ನಿಮ್ಮ ಮುಂದಿನ ಹೆಜ್ಜೆ?" ಎಂದು ಕೇಳಿದರೆ,

"ಅಯ್ಯೋ ಭಾರಿ ಡಿಮಾಂಡು ಕಣ್ರೀ. ಮಾಧ್ಯಮ ಸಲಹೆಗಾರ ಆಗು ಅಂತ ಡೈಲಿ ಫೋನ್ ಮೇಲೆ ಫೋನು. ನಾನೇ ಏನೂ ಹೇಳಿಲ್ಲ..."

"ಹಾಗೇನಾದರೂ ಆದರೆ ನಿಮ್ಮ ಯೋಜನೆಗಳು?"

"ನೋಡ್ತಿರಿ. ಮುಷ್ಕರ, ಬಂದ್, ಕರ್ಫ್ಯೂ, ನಿಷೇಧಾಜ್ಞೆ ಇತ್ಯಾದಿ ದಿನಗಳಂದು ಪತ್ರಕರ್ತರಿಗೆ ಸಾರ್ವತ್ರಿಕ ರಜೆ ಘೋಷಿಸುವ ಅಮೂಲ್ಯ ಸಲಹೆ ನೀಡ್ತೇನೆ. ಏನ್ ತಿಳ್ಕಂಡಿದೀರಿ..."

...ಎಂದು ಮುಂತಾಗಿ ಮಾತುಕತೆಗಳು ಮುಂದುವರಿದವು ಎಂಬಲ್ಲಿಗೆ ಮಂಗೀಶ ವೃತ್ತಾಂತದ ಪ್ರಥಮಾಧ್ಯಾಯವು ಪರಿಸಮಾಪ್ತಿಯಾದುದು.