Saturday 14 February 2009

ದಾವಣಗೆರೆ ದಿನಗಳು-1

ನಿಗಿನಿಗಿ ಉರಿಯುತ್ತಿರುವ ಕೆಂಡಗಳ ಮೇಲೆ ಸಪಾಟು ಕರಿ ಕಡಪದ ಕಲ್ಲು. ಆಯತಾಕಾರದ ಆ ಕಲ್ಲು ಎಷ್ಟು ದೊಡ್ಡದೆಂದರೆ ಒಂದು ಸಲಕ್ಕೆ 12 ದೋಸೆ ಚೊಯ್ ಅನಿಸಬಹುದು. ಬೆಳಗ್ಗೆ 6ಕ್ಕೇ ಅಂಗಳಕ್ಕಿಳಿದು ಬಲಗೈ ಹಾಗೂ ಎಡಗೈಯಲ್ಲಿ ತಲಾ ಒಂದೊಂದು ಗಂಟೆ ಬ್ಯಾಡ್ಮಿಂಟನ್ ಆಡಿ, ಟೈಮ್ ಇದ್ದರೆ ಒಂದು ಗಂಟೆ ಸ್ವಿಮಿಂಗ್ ಪೂಲ್ ನಲ್ಲಿ ಹಾರಾಡಿ, ಬೆಣ್ಣೆದೋಸೆ ಹೋಟೆಲ್ ನಲ್ಲಿ ಕುಳಿತುಕೊಳ್ಳುವಾಗ್ಗೆ 9.30 ದಾಟಿರುತ್ತಿತ್ತು. ದಾವಣೆಗೆರೆಯ ಡೆಂಟಲ್ ಕಾಲೇಜು ಎದುರಿನ 'ಕೊಟ್ಟೂರೇಶ್ವರ ಬೆಣ್ಣೆದೋಸೆ' ಹೋಟೆಲ್ ಅದು. ಮೈಕೈ ಕಾಲುಗಳೆಲ್ಲಾ ಆಹ್ಲಾದಕರವಾಗಿ ನೋಯುತ್ತಿದ್ದರೆ, ನಿಗಿನಿಗಿ ಕೆಂಡದ ಮೇಲೆ ಚೊಯ್ ಗುಡುವ ಖಾಲಿ, ಬೆಣ್ಣೆ ದೋಸೆಗಳನ್ನು ನೋಡುವುದು ಮತ್ತೊಂದು ಬಗೆಯ ಆಹ್ಲಾದ ತರುತ್ತಿತ್ತು. ಹಾಗೆ ಒಂದು ಸಲಕ್ಕೆ ತಯಾರಾಗುತ್ತಿದ್ದ 12 ದೋಸೆಗಳನ್ನೂ ಆರ್ಡರ್ ಮಾಡಿ ಅನಾಮತ್ತು ಬಾಯಿಗಿಳಿಸುತ್ತಿದ್ದ ದಿನಗಳೂ ಇದ್ದವು. ದೋಸೆಯ ಮೇಲೆ ಮುಕುಟದೋಪಾದಿಯಲ್ಲಿ ಕುಳಿತು, ಶ್ವೇತ ವರ್ಣದಿಂದ ಕಂಗೊಳಿಸುತ್ತಿದ್ದ ಬೆಣ್ಣೆಯಾಗಲೀ, ಲವಂಗಭರಿತ ಕಾಯಿಚಟ್ಟಿ-ಸಪ್ಪೆ ಆಲು ಪಲ್ಯವಾಗಲೀ ನಾನು ಎಂದೂ ಮರೆಯಲಾಗದ ತಿನಿಸುಗಳು. ಕೊಟ್ಟೂರೇಶ್ವರ ಅಲ್ಲದೇ ಹಳೇ ಬಸ್ ಸ್ಟಾಂಡ್ ಎದುರಿನ ಸಣ್ಣ ಮನೆ ಕಂ ಹೋಟಿಲ್ ನಲ್ಲೂ ಬೆಣ್ಣೆ ದೋಸೆ ಸೊಗಸಾಗಿರುತ್ತಿತ್ತು. ಅದರ ರುಚಿ, ಚಟ್ನಿಯ ಸ್ವರೂಪ ಬೇರೊಂದು ಬಗೆ. ಇನ್ನು ನಮ್ಮ ಪ್ರಜಾವಾಣಿ ಕಚೇರಿ ಹತ್ತಿರದ, ಕೆಟಿ ಜಂಬಣ್ಣ ಸರ್ಕಲ್ ಮೂಲೆಯಲ್ಲಿದ್ದ ಅಂಗಡಿಯೊಂದರಲ್ಲಿ ಇಡ್ಲಿ, ವಡೆ, ಪುಳಿಯೋಗರೆ, ಅವಲಕ್ಕಿ, ಚಿತ್ರಾನ್ನ ಸಿಗುತ್ತಿತ್ತು. ಅವಂತೂ ಒಂದಕ್ಕಿಂತ ಒಂದು ರುಚಿಕರವಾಗಿರುತ್ತಿದ್ದವು. ನಾನು ಕಸರತ್ತು ಮಾಡುತ್ತಿದ್ದ ದಿನಗಳಲ್ಲಿ ಅಲ್ಲಿಂದಲೇ ಮುಂಜಾನೆ ಬರೋಬ್ಬರಿ 20 ಇಡ್ಲಿಗಳನ್ನು ಕಟ್ಟಿಸಿಕೊಂಡು ಹೋಗಿ ತಿಂದು, ನೀರು ಕುಡಿದು ಮಲಗಿದೆ ಎಂದರೆ ಏಳುತ್ತಿದ್ದುದು ಮಧ್ಯಾಹ್ನದ ಮೇಲೆಯೇ. ತೀರಾ ಕಡಿಮೆ ಬೆಲೆಗೆ ಗುಣಮಟ್ಟದ, ರುಚಿಕರವಾದ ತಿಂಡಿ ಸಿಗುವುದು ಪ್ರಾಯಶಃ ದಾವಣಗೆರೆಯಲ್ಲಿ ಮಾತ್ರ. ಹಳೇ ದಾವಣಗೆರೆಯ ಗಡಿಯಾರ ಕಂಬದ ಬಳಿ ಕೇವಲ ಒಂದು ರೂಪಾಯಿಗೆ ಬೆಣ್ಣೆ ದೋಸೆ ಈಗಲೂ ಸಿಗುವುದಂತೆ! ವಿದ್ಯಾನಗರದ ಮಹಾತ್ಮಗಾಂಧಿ ಪ್ರತಿಮೆ ಬಳಿ ಗುಡಿಸಲೊಂದರಲ್ಲಿ ದೋಸೆ ಮಾಡುತ್ತಿದ್ದರು. ಪೇಪರ್ ಗಿಂತಲೂ ತೆಳುವಾದ ಆ ದೋಸೆಯ ರುಚಿ ಅಲ್ಲಿ ಬಿಟ್ಟರೆ ಇನ್ನೆಲ್ಲೂ ಸಿಗದು. ಇಡೀ ಒಂದು ದೋಸೆಯನ್ನು ಮಡಿಚಿ ಒಂದೇ ಸಲಕ್ಕೆ ಬಾಯಿಗಿಳಿಸುವುದು ನನಗೆ ಅಭ್ಯಾಸವಾಗಿದ್ದೇ ಅಲ್ಲಿ.
ದಾವಣಗೆರೆಯ ಊಟ ಅಂದರೆ ಅದೊಂಥರ ಉತ್ಸವದ ಹಾಗೆ. ಖಡಕ್ ರೊಟ್ಟಿ, ಚಪಾತಿ, ಜೋಳದ ರೊಟ್ಟಿ ಅದಕ್ಕೆ ಬದನೆಕಾಯಿ ಎಣ್ಣೆಗಾಯಿ, ಕಡ್ಲೆಬೀಜದ ಚಟ್ನಿ- ಅದಕ್ಕೆ ಮೊಸರು, ಸೊಪ್ಪಿನ ಪಲ್ಯ, ಹಸಿ ಸೊಪ್ಪು, ಕಡ್ಲೆಕಾಳು ಕೋಸಂಬರಿ, ಹೋಳಿಗೆ, ಮಾವಿನಹಣ್ಣಿನ ಸೀಕರಣೆ, ಚಿತ್ರಾನ್ನ, ಬಿಳಿ ಅನ್ನ, ಅದಕ್ಕೆ ನುಗ್ಗೇಕಾಯಿ ಸಾಂಬಾರು; ಇನ್ನು ಮೆಣಸಿನಕಾಯಿ ಬಜ್ಜಿ ಇಲ್ಲದೇ ಹೋದರೆ ಅದು ದಾವಣಗೆರೆಯ ಊಟವೇ ಅಲ್ಲ...
ಇನ್ನು ಬೀರೇಶ್ವರ ವ್ಯಾಯಾಮ ಶಾಲೆಯ ಉಸ್ತಾದರೂ, ಮಾಜಿ ಶಾಸಕರೂ ಆದ ಕೆ. ಮಲ್ಲಪ್ಪ ಅವರು ನಿಯಮಿತವಾಗಿ ದ್ವೈಮಾಸಿಕ ಪತ್ರಿಕಾಗೋಷ್ಠಿ ಏರ್ಪಡಿಸುತ್ತಿದ್ದರು. ಕುಸ್ತಿ ಪಂದ್ಯಾವಳಿಯ ಬಗ್ಗೆ ವಿವರ ನೀಡಿ ಅವರು ಸುಮ್ಮನಾಗುತ್ತಿರಲಿಲ್ಲ. ಪಾಕ್-ಚೀನಾ ಗಡಿ ಭಾಗದಲ್ಲಿ ಬಳ್ಳಾರಿ ಜಾಲಿ ಗಿಡಗಳನ್ನು ನೆಡುವ ಮೂಲಕ ದೇಶಕ್ಕೆ ರಕ್ಷಣೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆಯನ್ನೂ ಕೊಡುತ್ತಿದ್ದರು. ನಾನು ಪತ್ರಿಕಾಗೋಷ್ಠಿಗೆ ಹೋಗಿರುವುದನ್ನು ದೃಢಪಡಿಸಿಕೊಂಡ ಮೇಲಷ್ಟೇ ಮಾತು ಆರಂಭಿಸುತ್ತಿದ್ದರು. ಗೋಷ್ಠಿ ಮುಗಿದ ಮೇಲೆ ಸೊಗಸಾದ ದೇಸಿ ಊಟ. ಯಾವುದೇ ಪತ್ರಿಕಾ ಗೋಷ್ಠಿಯ ಊಟ ತಪ್ಪಿಸಬಹುದಾದರೂ ಮಲ್ಲಪ್ಪ ಅವರ ಗೋಷ್ಠಿಯ ಊಟವನ್ನು ತಪ್ಪಿಸುವಂತಿರಲಿಲ್ಲ. ಅದು ಕುಸ್ತಿಪಟುವೊಬ್ಬ ನಿರಾಕರಿಸಲಾಗದ ಊಟ. ಗಡದ್ದು ಊಟವಾದ ಮೇಲೆ, 'ಚಾಪೆ ಹಾಸಿ ಕೊಡಲೇ, ಸ್ವಲ್ಪ ಹೊತ್ತು ಮಲಗುತ್ತೀರೇ?' ಎಂದು ಕೇಳುತ್ತಿದ್ದರು ಮುಗ್ಧ ಮಲ್ಲಪ್ಪ... ದಾವಣಗೆರೆಯ ದಿನಗಳವು.
ಈಗಲೂ ಊಟದ ವಿಷಯ ಬಂದಾಗಲೆಲ್ಲಾ ದಾವಣಗೆರೆಯ ಮಾತು ತೆಗೆಯದೇ ಹೋದರೆ ನನಗೆ ಸಮಾಧಾನವಾಗುವುದಿಲ್ಲ. ದೆಹಲಿಯಲ್ಲಿ ಒಂದು ವರ್ಷ ಚೋಲೆ ಬಟೂರೆ, ಚೌಮೀನ್ ಗಳ ಮಧ್ಯೆ ನಾನು ಸೊರಗಿ ಹೋಗಿದ್ದಾಗ ದಾವಣಗೆರೆ ತಿಂಡಿ-ತಿನಿಸುಗಳ ಮೇಲಿನ ಗೌರವಾದರ ಇನ್ನಷ್ಟು ಹೆಚ್ಚಾಯಿತು.

5 comments:

ಚಿತ್ರಾ ಸಂತೋಷ್ said...

ಸರ್...
ಲೈಫಲ್ಲಿ ಒಂದೇ ಒಂದ್ಸಲ ಆದ್ರೂ, ದಾವಣಗೆರೆಗೆ ಹೋಗಿ ಊಟ ಮಾಡಿ ಪುಣ್ಯ ಕಟ್ಟಿಕೋಬೇಕು ಅಂತ ಬ್ಲಾಗ್ ಓದಿದ ಮೇಲೆ ನಿರ್ಧಾರ ಮಾಡಿಬಿಟ್ಟೆ ಸರ್..(:)
-ಚಿತ್ರಾ

Veeranna Kumar said...

ಘಮ ಘಮ ಘಮಾಡಸ್ತಾವ ದೋಸೆ- ದಾವಣಗೆರೆಯ ಬೆಣ್ಣೆ ದೋಸೆ.
ವಣ೵ನೆ ಓದಿ ಬಾಯಲ್ಲಿ ನೀರೂರಿತು ಸ್ವಾಮಿ! ದಾವಣಗೆರೆಯ ಬೆಣ್ಣೆ ದೋಸೆಗೊಂದು ದಿಲ್ಲಿ ಸಲಾಮ್!
ವೀರಣ್ಣ ಕಮ್ಮಾರ
veerannakumar.wordpress.com

Ittigecement said...

ಈಸಾರಿ ಹೋಗುವಾಗ ದಾವಣಗೇರೆಯಲ್ಲಿಯೇ ಊಟಮಾಡುವದು ಅಂತ ನಿರ್ಣಯ ಮಾಡಿದ್ದೇನೆ..

ಚಂದದ ಬರಹ..

ವಂದನೆಗಳು...

Shiva Prasad T R said...

ಅಯ್ಯೋ ಮಾರಾಯಾ? ದಾವಣಗೆರೆಲ್ಲಿ ಅಷ್ಟು ವರ್ಷ ಇದ್ರೂ, ಎಲ್ಲಾ ಹೋಟ್ಲುಗಳಲ್ಲಿ ಊಟ ಮಾಡಿದ್ರೂ, ಊಟ ಇಷ್ಟು ರುಚಿ ಇತ್ತು ಅಂತ ಗೊತ್ತಿರ್ಲೇ ಇಲ್ಲ! ಈಗ ನೀನು ಬರ್ದದ್ದು ಓದಿ, ಹೌದು ಅನ್ನಿಸ್ತಿದೆ. ಒಂದೂವರೆ ವರ್ಷದ ನಂತರ ದಾವಣಗೆರೆ ಬೆಣ್ಣೆ ದೋಸೆ ನೆನಪು ಬಂತು! ಐಬಿ ಹತ್ರದ ಬೆಣ್ಣೆ ದೋಸೆ ಹೋಟೆಲ್ ಮುಂದೆ ನೀನು ದಾವಣಗೆರೆಗೆ ಬಂದ ನಂತರ ಮೊದಲು ಭೇಟಿ ಮಾಡಿದ್ದೆವು! 4 ವರ್ಷಗಳ ನಂತರ ಮತ್ತೆ ಇಬ್ಬರೂ ಮಾತನಾಡಿದ್ದು ಅಲ್ಲಿಯೇ!

VEERANNARAYANA said...

ನಿಜ, ನಿಜ