Thursday, 22 January 2009

ವನರಂಗದ ಮೆಟ್ಟಿಲ ಮೇಲೆ ಒದ್ದೆಯಾದ ಕಣ್ಣು, ಮುದ್ದೆಯಾದ ಮನಸು...

Life is Stranger than fiction. ಕಥೆಗಳಲ್ಲಷ್ಟೇ ಸಾಧ್ಯ ಎನಿಸುವಂತಹ ಕೆಲವು ಘಟನೆಗಳು ನಿಜ ಬದುಕಿನಲ್ಲೂ ನಡೆಯುತ್ತಿರುತ್ತವೆ. ಈ ಸಂಗತಿ ಕೇಳಿ:
ನೀವು ಬಿ.ವಿ. ಕಾರಂತ ನಿರ್ದೇಶನದ 'ಗೋಕುಲ ನಿರ್ಗಮನ' ನಾಟಕ ನೋಡಿರಬಹುದು. ಭಾರತೀಯ ರಂಗಭೂಮಿಯ ಮಾಸ್ಟರ್ ಪೀಸ್ ಗಳಲ್ಲಿ ಅಗ್ರ ಸ್ಥಾನ ಅದಕ್ಕೆ. ನಾನು ಆ ದೃಶ್ಯವೈಭವವನ್ನು ಐದಾರು ಬಾರಿ ನೋಡಿದ್ದರೂ ಆ ಸಂಗೀತ ಸದಾ ಕೇಳಬೇಕೆನಿಸುತ್ತದೆ. ಮೊದಲ ಪ್ರಯೋಗದಿಂದ ಇಲ್ಲಿಯವರೆಗೆ ಆ ನಾಟಕದ ಗಾಯನ ಮತ್ತು ಹಾರ್ಮೊನಿಯಂ ನೋಡಿಕೊಳ್ಳುತ್ತಿರುವವರು ಚಂದ್ರಶೇಖರ್ ಆಚಾರ್ ಎಂಬ ರಂಗಕರ್ಮಿ. ಮೈಸೂರಿನಲ್ಲಿ ಅವರದೊಂದು ರಂಗತಂಡವೂ ಇದೆ. ಮಕ್ಕಳ ರಂಗಭೂಮಿಯಲ್ಲಿ ಅವರು ಸಾಕಷ್ಟು ಕೃಷಿ ಮಾಡಿದ್ದಾರೆ. ನಾನು ದೆಹಲಿಯಲ್ಲಿದ್ದಾಗ ಅವರ ಪರಿಚಯ ಆಗಿತ್ತು. ಅನಂತರ ಹಲವು ಬಾರಿ ಭೇಟಿಯಾದಾಗಲೆಲ್ಲಾ 'ಗೋಕುಲ ನಿರ್ಗಮನ' ನಾಟಕದ ಸಿಡಿ ಕೊಡುವಂತೆ ಅವರನ್ನು ಕೇಳಿಕೊಳ್ಳುತ್ತಿದ್ದೆ.
ಇತ್ತೀಚೆಗೆ ನಾನು ಮೈಸೂರಿಗೆ ಹೋಗಬೇಕಾಗಿ ಬಂತು, 75ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ, ಹಿರಿಯರೂ ಆದ ಪ್ರೊ. ಎಲ್. ಬಸವರಾಜು ಅವರ ಸಂದರ್ಶನ ಮಾಡಲು. ಅವರ ಹಾಸ್ಯಮಯ, ಪ್ರೌಢ ಮಾತುಗಳದೇ ಒಂದು ಅನುಭವ. ಅದರ ಬಗ್ಗೆ ಬೇರೆಯೇ ಬರೆಯುತ್ತೇನೆ. ಆದರೆ ಅಂದು ಸಂಜೆ ಆದ ಮತ್ತೊಂದು ಅನುಭವ ಎಂಥವರ ಮನಸ್ಸನ್ನೂ ಕದಡದೇ ಇರದು. ಮೈಸೂರಿಗೆ ಆ ದಿನ ಹೊರಟಿರುವ ವಿಷಯವನ್ನು ನಾನು ಈ ಮೊದಲೇ ಚಂದ್ರಶೇಖರ್ ಅವರಿಗೆ ದೂರವಾಣಿ ಮೂಲಕ ತಿಳಿಸಿ, ಅವರಿಂದ ಸಿಡಿ ಪಡೆಯುವ ಬಗ್ಗೆ ನಿಗದಿಪಡಿಸಿಕೊಂಡಿದ್ದೆ. ಸಂಜೆ 5.30ರ ಹೊತ್ತಿಗೆ ಎಲ್ ಬಿ ಸಂದರ್ಶನ ಮುಗಿಯಿತು. ಕೂಡಲೇ ಚಂದ್ರಶೇಖರ್ ಗೆ ಕರೆ ಮಾಡಿ ರಂಗಾಯಣಕ್ಕೆ ಬರುವುದಾಗಿಯೂ ಅಲ್ಲಿಗೆ ತಾವು ಸಿಡಿ ತರಬೇಕೆಂದೂ ವಿನಂತಿಸಿದೆ. ಸಂಜೆ 6.30ಕ್ಕೆ ಬರುವುದಾಗಿ ಹೇಳಿದರು. ಅಂದು ರಂಗಾಯಣದ ವನರಂಗದಲ್ಲಿ 'ನಟ ನಾರಾಯಣಿ' ನಾಟಕ. ನಾನು ನಾಟಕ ನೋಡುತ್ತಾ ಕುಳಿತೆ. 7 ಘಂಟಯಾದರೂ ಚಂದ್ರಶೇಖರ್ ಬರಲಿಲ್ಲ. ಇನ್ನೂ ತಡವಾದರೆ ನನಗೆ ಬೆಂಗಳೂರಿಗೆ ಹಿಂದಿರುಗಲು ತೊಂದರೆಯಾಗುತ್ತಿತ್ತು. ಹೀಗಾಗಿ ಮತ್ತೆ ಕರೆ ಮಾಡಿದಾಗ, ಅವರು ಹೊರಟಿದ್ದೇನೆ ಎಂದರು. ಅಂತೂ 7.30ರ ಹೊತ್ತಿಗೆ ಬಂದು ಸಿಡಿ ಕೊಟ್ಟರು. 'ತಡವಾಯಿತು ಕ್ಷಮಿಸಿ. ಇವತ್ತು ನನ್ನ ಎರಡನೇ ಮಗು ತೀರಿಕೊಂಡಿತು. ಮಣ್ಣು ಮಾಡಿ ಬರುವುದು ತಡವಾಗಿಬಿಟ್ಟಿತು!!' ಎನ್ನೋದೆ?
ಇದನ್ನು ಓದುವಾಗ ನಿಮಗೇ ಇಷ್ಟೊಂದು ಶಾಕ್ ಆಗಬೇಕಾದರೆ, ಈ ಮಾತನ್ನು ಕೇಳುವಾಗ ನನಗೆ ಅದೆಷ್ಟಾಗಿರಬೇಕು ಊಹಿಸಿ. ಹುಟ್ಟಿದ ಕೆಲವೇ ದಿನಗಳಲ್ಲಿ ಅವರ ಮಗು, ವೈದ್ಯರ ತಪ್ಪಿನಿಂದಾಗಿ ತೀರಿಕೊಂಡಿತಂತೆ. 'ಅಲ್ರೀ, ಸಿಡಿಗೆ ಅಂಥಾ ಅರ್ಜೆಂಟ್ ಏನಿರಲಿಲ್ಲ. ಒಂದು ಮಾತು ಹೀಗೆ ಅಂತ ಹೇಳಿದ್ದರೆ ಆಗಿತ್ತು. ನೀವು ಯಾಕೆ ಈಗ ಬರಲು ಹೋದಿರಿ. ನನ್ನನ್ನ ಯಾಕೆ ಸಂಕಟದಲ್ಲಿ ಸಿಕ್ಕಿಸಿದಿರಿ, ಎಂದು ಅವರಲ್ಲಿ ಪರಿಪರಿಯಾಗಿ ಅವಲತ್ತುಕೊಂಡೆ. 'ನಾನು ಕಲಾವಿದ ಸಾರ್. ನನಗೆ ಆ ಬದ್ಧತೆ ಇದೆ. ಮಗು ತೀರಿದ ಸುದ್ದಿ ತಿಳಿದಾಗಲೂ, ನಾನು ಮೊದಲೇ ಒಪ್ಪಿಕೊಂಡಿದ್ದ 'ರಂಗ ಸಂಗೀತ' ವರ್ಕ್ ಶಾಪ್ ಪೂರ್ಣಗೊಳಿಸಿಯೇ ಹೊರಟಿದ್ದು' ಎಂದರು.
Incidentally, ನನ್ನ 2ನೇ ನಾಟಕದಲ್ಲೂ ಇಂಥ ಒಂದು ದೃಶ್ಯ ಬರೆದಿದ್ದೆ. ಬುದ್ಧನ ಕಾಲದ ಕಥಾವಸ್ತುವಿನ ಆ ನಾಟಕದಲ್ಲಿ ಸೇನಾಪತಿ ಬಂಧುಲಮಲ್ಲನ ಪತ್ನಿ ಮಲ್ಲಿಕಾ ಎಂಬಾಕೆ, ಬುದ್ಧ ಗುರು ಮತ್ತು ಭಿಕ್ಷುಗಳ ಉಪಾಸನೆಯಲ್ಲಿ ತೊಡಗಿರುವಾಗಲೇ ಆಕೆಯ ಪತಿ ಮತ್ತು 10 ಮಂದಿ ಪುತ್ರರು ಕುತಂತ್ರದಿಂದ ಹತ್ಯೆಗೆ ಒಳಗಾದ ಸುದ್ದಿ ಬರುತ್ತದೆ. ಆದರೂ ಆಕೆ ವಿಚಲಿತಳಾಗದೆ ಬೌದ್ಧ ಭಿಕ್ಷುಗಳ ಊಟೋಪಚಾರವೆಲ್ಲಾ ಮುಗಿದ ಮೇಲಷ್ಟೇ ದುರಂತದ ಸಂಗತಿಯನ್ನು ಶಾಂತವಾಗಿ ಹೇಳುತ್ತಾಳೆ. ಇಂಥದೊಂದು ಘಟನೆ ನನ್ನ ಅನುಭವಕ್ಕೆ ಸಾಕ್ಷಾತ್ತಾಗಿ ಬರಲಿದೆ ಎಂದು ನಾನು ಆ ದೃಶ್ಯ ಬರೆಯುವಾಗ್ಗೆ ಊಹಿಸಿರಲಿಲ್ಲ.
ಜಗತ್ತಿನಲ್ಲಿ ಇಂಥವರೂ ಇರುತ್ತಾರೆ!

4 comments:

Shiva Prasad T R said...

Its moving. It touches the heart. Its really difficut to develop such calmness and comitment by us. We expect more writings in your blog and regular updates frined.

Unknown said...

ಈ ಸಂಗತಿ ಕೇಳಿ ನಾನು ದಂಗಾದೆ. ಈಗಿನ ಚಲ್ತಾ ಹೈ ಜಮಾನಾದಲ್ಲೂ ಅಂತಹ ವ್ಯಕ್ತಿಗಳಿದ್ದಾರೆ ಎಂದರೆ ನಂಬುವುದಕ್ಕೇ ಆಗದು. ಅಂದು ನಾವಿಬ್ಬರೂ ಅವರನ್ನು ರಂಗಶಂಕರದಲ್ಲಿ ಭೇಟಿಯಾದಾಗ ಎಲ್ಲ ರಂಗಕರ್ಮಿಗಳಂತೆ ಅವರೂ ಒಬ್ಬರು ಎಂದುಕೊಂಡು ಅವರ ಆತ್ಮೀಯ ಮಾತಿಗೆ ಮೆಚ್ಚಿಕೊಂಡಿದ್ದೆ. ಆದರೆ, ಈ ಪರಿಯ ಬದ್ಧತೆ ಎಂದರೆ ಅಬ್ಬಾ..!!
ರಿಯಲಿ ಗ್ರೇಟ್.. ಹೀಗೆ ಹೇಳಿದರೂ ಈ ಗ್ರೇಟ್ ಪದವೇ ಅವರ ಮುಂದೆ ಚಿಕ್ಕದು ಎನಿಸುತ್ತೆ!

S N Deepak said...

Indeed a can't believe thing nowadays. Really amazed to know people with such values and commitment are still around us! Great!

ಚಿತ್ರಾ ಸಂತೋಷ್ said...

ಸರ್..ಓದಿ ಆಗುವಷ್ಟರ ಹೊತ್ತಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ...ಅಚ್ಚರಿ, ನೋವು ಎಲ್ಲವೂ ಮನದೊಳಗೆ ಮಡುಗಟ್ಟಿದೆ. ಈಗಲೂ ಇಂಥವರು ಇರ್ತಾರಲ್ವಾ?ಇಂಥ 'ಶ್ರೇಷ್ಠತೆ'ಯನ್ನು ಅಳವಡಿಸಿಕೊಂಡಿರುವವರು ಬೆರಳಣಿಕೆಯಷ್ಟು ಮಂದಿ.
ಸಮಯವಿರುವಾಗಲೆಲ್ಲಾ..ನಮಗೆ ಬರಹದೂಟ ಉಣಿಸಿ.
-ಪ್ರೀತಿಯಿಂದ,
ಚಿತ್ರಾ