Tuesday, 5 April 2011

ಕಳ್ ಮಂಗ

ಅಕ್ಟೋಬರ್ ರೆವಲ್ಯೂಷನ್ ಪಿಕ್ಚರ್ಸ್
ಅರ್ಪಿಸುವ

'ಮೈಂಡ್ ಇಟ್' ಪ್ರೊಡಕ್ಷನ್ಸ್‌ರವರ

ಕಳ್ ಮಂಗ
ಹನಿ ಹನಿ ಮಂಗ್ ಕಹಾನಿ

(ಕಂಪ್ಲೀಟ್ ಕಾಮಿಡಿ ಆಫ್ ಎರರ್ಸ್)
(ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ ಪಡೆದ ಸಂಪೂರ್ಣ ಹಾಸ್ಯಮಯ ಚಿತ್ರ. ಅದ್ದೂರಿ ತಾರಾಗಣವಿದೆ)
ಈ ಚಿತ್ರದ ಯಾವುದೇ ದೃಶ್ಯ ಅಥವಾ ಸನ್ನಿವೇಶಗಳು ಕೇವಲ ಕಾಲ್ಪನಿಕವಲ್ಲ



ದೃಶ್ಯ-೧
ಹಗಲು, ಔಟ್‌ಡೋರ್

ಬೆಟ್ಟ-ಗುಡ್ಡಗಳಿಂದ ಕೂಡಿದ ಒಂದು ಅರೆ-ಅರಣ್ಯ ಪ್ರದೇಶ. ಒಂದು ಪರ್ಣಕುಟಿಯ ಶಾಟ್‌ನಿಂದ ದೃಶ್ಯ ಆರಂಭ. ಪರ್ಣಕುಟಿಯ ಬಾಗಲಿನಿಂದ ಜೂಮ್‌ಔಟ್ ಆಗುತ್ತಾ ಸುತ್ತಲ ಬೆಟ್ಟಗುಡ್ಡಗಳೆಲ್ಲಾ ತೆರೆಯ ಮೇಲೆ ಕಾಣಿಸತೊಡಗುತ್ತವೆ. ಬೆಟ್ಟದ ಒಂದು ಭಾಗದತ್ತ ಕ್ಯಾಮೆರಾ ಪ್ಯಾನ್ ಆಗುತ್ತದೆ. ಅಲ್ಲಿ ನಾಲ್ಕೈದು ಮಂದಿ ಧಾಂಡಿಗರು ಕುಡಿಯುತ್ತಾ, ತಿನ್ನುತ್ತಾ ಮೋಜಿನಲ್ಲಿ ತೊಡಗಿರುತ್ತಾರೆ. ನಡುನಡುವೆ ಗುಂಪಿನಲ್ಲಿದ್ದವನೊಬ್ಬ ಬಂಡೆಯ ಮರೆಯಿಂದ ದೂರದ ಪರ್ಣಕುಟಿಯತ್ತ ನೋಡುವುದು, ಇತರರಿಗೆ ಸಂಜ್ಞೆ ಕೊಡುವುದು ಮಾಡುತ್ತಿರುತ್ತಾನೆ. ಮೋಜು-ಮಸ್ತಿ ಮುಂದುವರಿಯುತ್ತದೆ. ಇದ್ದಕ್ಕಿದ್ದಂತೆಯೇ ಒಂದು ಗಡಸು ದನಿ ಕೇಳಿ ಬರುತ್ತದೆ.

ದನಿ: ವಾಟ್ ದ ಹೆಲ್ ಈಸ್ ಹ್ಯಾಪೆನಿಂಗ್ ಇನ್ ದಿಸ್ ಹಿಲ್?!

ಎಲ್ಲರೂ ದನಿ ಬಂದತ್ತ ತಿರುಗಿ ನೋಡುತ್ತಾರೆ. ಅಲ್ಲಿ ಸೊಂಟದ ಮೇಲೆ ಎರಡೂ ಕೈಗಳನ್ನು ಬಿಗಿದು ದುರದುರನೆ ಕಣ್ಣುಬಿಟ್ಟು ನಿಂತ, ದಪ್ಪನೆ-ಕಪ್ಪನೆ ಹೆಂಗಸೊಬ್ಬರು ಕಾಣುತ್ತಾರೆ. ಎಲ್ಲರೂ ಅವಾಕ್ಕಾಗುತ್ತಾರೆ. (ಪ್ರತಿಯೊಬ್ಬರ ರಿಯಾಕ್ಷನ್ಸ್-ಫೇಸ್ ಕ್ಲೋಸ್ ಶಾಟ್ಸ್).
ಒಬ್ಬ: (ಪಿಸುದನಿಯಲ್ಲಿ) ಮಗಾ ಇದ್ಯಾವುದೋ ಫ್ಯಾಂಟಮ್ಮ ಇರಬೇಕು ಕಣ್ಲಾ... ಮಟಮಟ ಮಧ್ಯಾನದಾಗ ಎಲ್ಲಿಂದ ಬಂತ್ಲಾ ಈ ಗಾಳಿ...

ಇನ್ನೊಬ್ಬ: (ಮೆಲ್ಲಗೆ) ಇಲ್ಲಾ ಕಣ್ಲಾ ಈಕಿ ಮಾರಿಮುತ್ತು ಇರಬೇಕು. ನೋಟ-ಮಾಟ ಹಂಗೇ ಅಯ್ತೆ. ಕನ್ನಡಕ ಒಂದು ಎಕ್ಸ್‌ಟ್ರಾ ಅಷ್ಟೇಯ...

ಮತ್ತೊಬ್ಬ: ಯಾರಾರ ಆಗ್ಲಿ. ಹಿಡ್ಕಳ್ರಲಾ... ನಾಲ್ಕ್ ಚಚ್ಚಾವ. ನಮ್‌ಗೇ ಧಮಕಿ ಆಕ್ತಳೆ...

ಒಬ್ಬ: ಯಾಕೆ ಬೇಕಪ್ಪಾ ಫ್ಯಾಂಟಮ್ಮನ ಸವಾಸ... ಓಡವಾ ಬರ್ರಲಾ...
(ಎಲ್ಲರೂ ಓಡಲು ಮುಂದಾಗುತ್ತಾರೆ)

ಹೆಂಗಸು: (ಮುಂಚಿನ ಗಡಸು ದನಿಯಲ್ಲಿ) ಸ್ಟಾಪ್ ಇಟ್, ಸ್ಟಾಪ್ ಇಟ್. ಯಾವ ಸೀಮೆ ಗಂಡಸ್ರಯ್ಯಾ ನೀವೆಲ್ಲಾ. ಹೋಗಿ ಹೋಗಿ ನಿಮ್ಮನ್ನ ಕರಕೊಂಡು ಬಂದಿದೀನಲ್ಲಾ ಬಡ್ಸಾಕೆ... ಹೆಚ್ಚಿನ ಪಕ್ಷ ನನ್ ಮೆಟ್ಟಲ್ ನಾನೇ ಹೊಡ್ಕಬೇಕು...

ಇನ್ನೊಬ್ಬ: (ಯೋಚಿಸುತ್ತಾ) ಈ ದನಿ ಎಲ್ಲೋ ಕೇಳ್ದಂಗೆ ಐತಲ್ಲಾ...

ಹೆಂಗಸು: ಅಪ್ಪಾ ಅಣ್ಣಾ, ನಾನ್ ಕಣ್ರಯ್ಯಾ ಮಂಗೀಶ್...

ಎಲ್ಲರೂ: ಇದೇನ್ ಬಾಸು? ಏನ್ ವೇಷ, ಏನ್ ಕಥೆ. ಗುರ‍್ತೇ ಸಿಕ್ಕಲ್ವಲ್ಲಾ ಬಾಸು...

ಒಬ್ಬ: ಅಲ್ಲಾ ಬಾಸು, ಬಡಿದಾಡೋವಾಗ ಅಕಸ್ಮಾತ್ ಸಿಕ್ಕಿ ಹಾಕ್ಕಂಡ್ರೆ ಗುರ‍್ತು ಸಿಗಬಾರ‍್ದು ಅಂತ ಹಿಂಗೆ ಬಂದಿದೀರಿ ಅಲ್ವೇ...?

ಮತ್ತೊಬ್ಬ: ಒಳ್ಳೇ ಐಡಿಯಾ ಬಾಸು.

ಮಂಗೀಶ್: ಸ್ಟಾಪ್ ಇಟ್, ಸ್ಟಾಪ್ ಇಟ್. ನಾನ್‌ಸೆನ್ಸ್. ನನಗೆ ಆ ಥರ ಭಯ ಎಲ್ಲಾ ಇಲ್ಲ ಕಣ್ರೀ. ನಾನು ವೀರುಡು, ಶೂರುಡು ಅಂತಾ ಎಷ್ಟು ಸಲ ಬಡ್ಕೋಬೇಕ್ರಯ್ಯಾ. ನೋಡಿಪ್ಪಾ, ನಾನು ತುಂಬಾ ಡಿಸಿಪ್ಲೈನ್‌ಡ್. ಫೀಮೇಲ್ ಐಡಿಯಿಂದ ಮೇಲ್ ಕಳ್ಸೋವಾಗ ಫೀಮೇಲ್ ಥರಾನೆ ಡ್ರೆಸ್ ಮಾಡ್ಕೋತೇನೆ. ಇವತ್ತು ಅರ್ಜೆಂಟಾಗಿ ಒಂದು ಮೇಲ್ ಕಳಿಸಿದೆ. ನಿಮಗೆ ಲೇಟ್ ಆಗ್ಬೋದು ಅಂತಾ ಉಟ್ಟ ಸೀರೇಲೆ ಬಂದಿದೀನಿ. ಈ ಥರ ಕಮಿಟ್‌ಮೆಂಟ್ ಯಾರಿಗಾದರೂ ಇದೆಯಾ ನೀವೆ ಹೇಳಿ.

ಒಬ್ಬ: ನೀವೇನೆ ಹೇಳಿ. ಈ ಸೀರೆಲಿ ತುಂಬಾ ಚೆನ್ನಾಗಿ ಕಾಣ್ತೀರಿ...

ಮಂಗೀಶ್: (ಚಿಟಿಕೆ ಹೊಡೆಯುತ್ತಾ) ಸ್ಟಾಪ್ ಇಟ್. ಹಿಂಗೇ ಮಾತಾಡ್ತೀರಾ? ಹೋಗಿ ಕೆಲಸಾ ಮುಗಿಸಿ ಬರ‍್ತೀರಾ?

ಇನ್ನೊಬ್ಬ: ಬಾಸು ಸರಿಯಾಗಿ ೧೨ ಗಂಟೆಗೆ ಹೋಗಿ ಬಡಿಯೋಕೆ ಮುಹೂರ್ತ ಇಟ್ಟಿದೀರಾ. ಇನ್ನೂ ಹತ್ತು ನಿಮಿಷ ಇದೆ. ಈ ಸೀರೆನಲ್ಲಿ ಒಂದೇ ಒಂದು ಡ್ಯಾನ್ಸ್ ಮಾಡಿ ಬಾಸು...

ಮಂಗೀಶ್: ಛೀ. ನಾನು ಬೇಕಾದ್ರೆ ಒಂದು ಶಾಯರಿ ಹೇಳ್ತೇನೆ. ಡ್ಯಾನ್ಸ್ ಬೇಡ.

ಇನ್ನೊಬ್ಬ: ಹೋಗ್ಲಿ ಹೇಳಿ ಬಾಸು

ಮಂಗೀಶ್: ನಾನು ಜಗದೇಕವೀರುಡು. (ಎಲ್ಲರೂ ಸುಮ್ಮನಿರುವುದುನ್ನು ನೋಡಿ) ವಾ ವಾ ಅನ್ರಯ್ಯಾ...

ಎಲ್ಲರೂ: ವಾ ವಾ

ಮಂಗೀಶ್: ನಾನು ಜಗದೇಕವೀರುಡು, ಲಂಡನ್ ರಿಟರ್‌ನುಡು

ಎಲ್ಲರೂ: ವಾ ವಾ

ಮಂಗೀಶ್: ನಾನು ಜಗದೇಕವೀರುಡು, ಲಂಡನ್ ರಿಟರ್‌ನುಡು
ಎಲ್ಲರಿಗಿನ್ನ ನಾನೇ ಮೇಲು, ನನ್ ಐಡಿ ಮಾತ್ರ ಫೀಮೇಲು...

ಎಲ್ಲರೂ: ವಾ ವಾ ವ್ಹಾ... (ಚಪ್ಪಾಳೆ ಹೊಡೆಯುತ್ತಾರೆ)

ಮಂಗೀಶ್: ಹೂಂ. ಸಾಕಿನ್ನ. ನಡೀರಿ ಪೊಸಿಷನ್ ತಗೊಳ್ಳಿ. ಅವನು ಭಾಳ ಖತರ್‌ನಾಕು. ಚೆನ್ನಾಗಿ ಬಾರ‍್ಸಿ ಹೇಳ್ತೀನಿ...

ಇನ್ನೊಬ್ಬ: ಬಾಸು ಇನ್ನೂ ಟೈಮಿದೆ. ಒಂದೇ ಒಂದು ಹಾಡು-ಡ್ಯಾನ್ಸು ಬಾಸು...

ಮಂಗೀಶ್: ಏನ್ ಡ್ಯಾನ್ಸು ಡ್ಯಾನ್ಸು ಅಂತಾ ಬಡ್ಕೊಂತೀರ್ರಯ್ಯಾ... ನಾನು ಡ್ಯಾನ್ಸೆಲ್ಲಾ ಆಡಿ ತುಂಬಾ ದಿನ ಆಯ್ತು...

ಮತ್ತೊಬ್ಬ: ಆಡಿ ಬಾಸು ನಾವೆಲ್ಲಾ ಕೇಳೋದು ಹೆಚ್ಚೋ... ನೀವು ಆಡೋದೋ....

ಮಂಗೀಶ್: ಸರಿ ಐದು ನಿಮಿಷ ಅಷ್ಟೇ...

(ಎಲ್ಲರೂ ವಿಷಲ್ ಹೊಡೆಯುತ್ತಾ, ಚಪ್ಪಾಳೆ ತಟ್ಟತೊಡಗುತ್ತಾರೆ. ಮಂಗೀಶ್ ಸೆರಗು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾ ಜಾವೆದ್ ಮಿಯಾಂದಾದ್ ರೀತಿ ಕುಪ್ಪಳಿಸುತ್ತಾ ಆಡತೊಡಗುತ್ತಾನೆ)

ಸಾಂಗ್ ನಂಬರ್-೧
ಮಂಗೀಶ್: ಸಿಕ್ಕಾಪಟ್ಟೆ ಸ್ಕೆಚ್ಚಾಕ್ಬುಟ್ಟೆ
ಕಚ್ಡಾ ಮೇಲು ಕಳ್ಸೇ ಬುಟ್ಟೆ /೨/
ಐ ಸೆಂಟ್ ಇಟ್ /೨/
ನಾನು ಸೂ...ಪರ್ ಮಂಗ
ನಾನು ಸೂ...ಪರ್ ಮಂಗ

ಕೋರಸ್: ನೀನು ಸೂಪರ್ ಮಂಗ
ಅಲಿಯಾಸ್ ಠುಸ್ಸು ಮಂಗ
ಮಾಡಿದ್ರೆ ನಿನ್ನ ಸಂಗ
ನಮ್ಮಭಿಮಾನ ಭಂಗ

ಮಂಗೀಶ್: ನಾನು ಸೂ....ಪರ್ ಮಂಗ
ನಾನು ಸೂಪರ್ ಡೂಪರ್ ಮಂಗ

ಕೋರಸ್: ಫೀಮೇಲ್ ಐಡಿಯಿಂದ
ಕಳ್ ಮೇಲ್ ಕಳ್ಸೋ ಮಂಗ
ಕಿವಿಮೇಲ್ ದಾಸವಾಳ
ಆಮೇಲ್ ಮುಡ್ಸೋ ಮಂಗ

ಮಂಗೀಶ್: ನಾನು ಸೂ.....ಪರ್ ಮಂಗ
ನಾನು ಸೂಪರ್ ಡೂಪರ್ ಮಂಗ

ಮಂಗೀಶ್: ಸಿಕ್ಕಾಪಟ್ಟೆ ಸ್ಕೆಚ್ಚಾಕ್ಬುಟ್ಟೆ
ಕಚ್ಡಾ ಮೇಲು ಕಳ್ಸೇ ಬುಟ್ಟೆ /೨/
ಐ ಸೆಂಟ್ ಇಟ್ /೨/


(ಚರಣ) ಮಂಗೀಶ್: ಕಚ್ಡಾ ಮೇಲನ್ನ ಕಳ್ಸಿದ್ ಮೇಲ್ ನನ್ನ
ಚಚ್ಚೇ ಬಿಟ್ಟ ಸರ‍್ಯಾಗ್ ಬಾರ‍್ಸೇ ಬಿಟ್ಟ
ನನ್ನ ಬಣ್ಣಾನ ಬಯಲು ಮಾಡ್ದೋನ್ನ
ಬಿಡ್ಲೇಬಾರ‍್ದು ಸುಮ್ನೇ ಬಿಡ್ಲೇ ಬಾರ‍್ದು

ಹಂಗಂತ ಸ್ಕೆಚ್ಚಾಕಿ ಹೆಂಗೆಂಗೋ ಹೊಂಚಾಕಿ
ಗ್ಯಾಂಗನ್ನ ಸೇರ‍್ಸೇ ಬಿಟ್ಟೆ
ಮರೆಯಲ್ಲೇ ನಿಂತ್ಕಂಡು ತಲೆಯೆಲ್ಲಾ ಕೆರ‍್ಕಂಡು
ಬಾರ‍್ಸಕ್ಕೆ ಕಳ್ಸೇ ಬಿಟ್ಟೆ

ನಾನು ಸೂ....ಪರ್ ಮಂಗ
ನಾನು ಸೂಪರ್ ಡೂಪರ್ ಮಂಗ

ಕೋರಸ್: ನೀನು ಸೂಪರ್ ಮಂಗ
ಅಲಿಯಾಸ್ ಹೊಲ್ಸು ಮಂಗ
ಮಾಡಿದ್ರೆ ನಿನ್ನ ಸಂಗ
ನಮ್ಮಭಿಮಾನ ಭಂಗ

ಮಂಗೀಶ್: ನಾನು ಸೂ....ಪರ್ ಮಂಗ
ನಾನು ಸೂಪರ್ ಡೂಪರ್ ಮಂಗ

ಸಿಕ್ಕಾಪಟ್ಟೆ ಸ್ಕೆಚ್ಚಾಕ್‌ಬುಟ್ಟೆ
ಗ್ಯಾಂಗು ಕಳ್ಸಿ ಬಡ್ಸೇ ಬುಟ್ಟೆ /೨/
ಐ ಸೆಂಟ್ ಇಟ್ /೨/

ಮಂಗೀಶ್: (ಇದ್ದಕ್ಕಿದ್ದಂತೆಯೇ ಹಾಡು-ಕುಣಿತ ನಿಲ್ಲಿಸಿ, ಎಲ್ಲರನ್ನೂ ಹತ್ತಿರ ಕರೆದು) ನೋಡಿ, ಕೆಲವರು ನನ್ನ 'ಠುಸ್ ಮಂಗೀಶ್' ಅಂತಾರೆ, ಇನ್ನು ಕೆಲವರು 'ಹೊಲಸು ಮಂಗೀಶ್' ಅಂತಾರೆ. ಆದ್ರೆ ರಿಯಲ್ ಮಂಗೀಶ್ ಏನು ಅಂತಾ ಇನ್ನೂ ಯಾರಿಗೂ ಗೊತ್ತಿಲ್ಲಾ... (ಎನ್ನುತ್ತಾ ರವಿಕೆಯೊಳಗಿಂದ ಮಚ್ಚೊಂದನ್ನು ತೆಗಿಯುತ್ತಾನೆ. ಝೂಮ್ ಟು ಮಚ್ಚು).

ಎಲ್ಲರೂ ನಗತೊಡಗುತ್ತಾರೆ.

ಒಬ್ಬ: ಓಹ್ ನೀವು ರಿಯಲ್ ಆಗಿ ಮಚ್ ಮಂಗೀಶ್...

ಮಂಗೀಶ್: ಸ್ಟಾಪ್ ಇಟ್. ನಾನು ಇಷ್ಟು ಕಷ್ಟ ಪಟ್ಟು ರವಿಕೆಯಿಂದ ಮಚ್ಚು ತೆಗಿತಾ ಇದ್ದೀನಿ. ನೀವು ನಗ್ತಾ
ಇದ್ರೀರಲ್ರಯ್ಯಾ... ಏನು ಬಡ್ಕೊಂಡು ಸಾಯಣ್ರಯ್ಯಾ ನಿಮ್ ಹತ್ರಾ... ಹೆದರಿಕೊಳ್ರಯ್ಯಾ...
(ಎನ್ನುತ್ತಾ ಮತ್ತೆ ಮಚ್ಚು ಒಳಗಿಟ್ಟು, ಮತ್ತೆ ಹಿಂದಿನ ಡಯಲಾಗ್ ರಿಪೀಟ್ ಮಾಡುತ್ತಾ ಮಚ್ಚು ತೆಗೆಯುತ್ತಾನೆ)
ಕೆಲವರು ನನ್ನ 'ಠುಸ್ ಮಂಗೀಶ್' ಅಂತಾರೆ, ಇನ್ನು ಕೆಲವರು 'ಹೊಲಸು ಮಂಗೀಶ್' ಅಂತಾರೆ. ಆದ್ರೆ ರಿಯಲ್ ಮಂಗೀಶ್ ಏನು ಅಂತಾ ಇನ್ನೂ ಯಾರಿಗೂ ಗೊತ್ತಿಲ್ಲಾ... (ಎಲ್ಲರೂ ಹೆದರಿಕೊಳ್ಳುವಂತೆ ನಟಿಸುತ್ತಾರೆ. ಕಟ್ ಶಾಟ್ಸ್. ನಂತರ ಎಲ್ಲರನ್ನೂ ಹತ್ತಿರ ಕರೆದು ಹೀಮ್ಯಾನ್‌ನಂತೆ ಮಚ್ಚನ್ನು ಮೇಲೆತ್ತುತ್ತಾ) ಎಲ್ಲರೂ ಹೇಳಿ, ಫೇರ್ ಈಸ್ ಫೌಲ್, ಫೌಲ್ ಈಸ್ ಫೇರ್...

ಎಲ್ಲರೂ: ಫೇರ್ ಈಸ್ ಫೌಲ್, ಫೌಲ್ ಈಸ್ ಫೇರ್

ಮಂಗೀಶ್: ಹಾ ನಡೀರಿ ಇನ್ನ. ನೀವಿಬ್ಬರೂ ಕುಟೀರದ ಎಡಭಾಗದಲ್ಲಿ ನಿಲ್ಲಿ, ನೀವು ಬಲಭಾಗದಲ್ಲಿ ಪೊಸಿಷನ್ ತಗೋಳಿ. ಬಾಕಿ ಇಬ್ಬರು ಎದುರುಗಡೆ ಮರದ ಹಿಂದೆ ಮರೆಯಾಗಿ ನಿಲ್ಲಿ. ಆತ ಬಂದಿದ್ದೇ ತಡ ಒಟ್ಟಿಗೇ ಅಟ್ಯಾಕ್ ಮಾಡಿ ಬಡಿಯಬೇಕು. ಗೊತ್ತಾಯ್ತೆ?

ಎಲ್ಲರೂ: ಓಕೆ ಬಾಸ್, ಡೋಂಟ್ ವರಿ

ಮಂಗೀಶ್: ನೋಡಿ ನನಗಿದೆಲ್ಲಾ ಚಿಟಿಕೆ ಹೊಡೆದಷ್ಟು ಕೆಲಸ ಅಷ್ಟೇ. ನಿಮಗೂ ಟ್ರೈನಿಂಗ್ ಆಗ್ಲಿ ಅಂತಾ ಕಳಿಸ್ತಾ ಇದೇನೆ. ಏನಾದ್ರು ಹೆಚ್ಚಿ-ಕಮ್ಮಿ ಆದ್ರೆ ನನ್ನ ಕರೀರಿ. ಇಲ್ಲೇ ಸ್ವಲ್ಪ ರೆಸ್ಟ್ ತಗೋತಾ ಇರ‍್ತೇನೆ.

ಎಲ್ಲರೂ: ಆಗ್ಲಿ ಬಾಸ್

ಮಂಗೀಶ್: ಸರೀ ಹೋಗಿ.
(ಎಲ್ಲರೂ ಹೊರಡುತ್ತಾರೆ. ಮಂಗೀಶ್ ಅತ್ತ-ಇತ್ತಾ ನೋಡಿ ಯಾರಿಗಾದರೂ ಗುರುತು ಸಿಕ್ಕೀತೆಂಬ ಆತಂಕದಿಂದ ಸೆರಗು ಹೊದ್ದುಕೊಂಡು ಬಂಡೆಯ ಮರೆಯಲ್ಲೇ ಕುಳಿತುಕೊಳ್ಳುತ್ತಾನೆ. ತನ್ನ ಎದೆಯನ್ನು ತಾನೇ ಮೆಲ್ಲಗೆ ತಟ್ಟಿಕೊಳ್ಳುತ್ತಾ ‘ಫೇರ್ ಈಸ್ ಫೌಲ್, ಫೌಲ್ ಈಸ್ ಫೇರ್’ ಎಂಬ ಮಂತ್ರ ಹೇಳಿಕೊಂಡು ತಾನೇ ಸಮಾಧಾನ ಮಾಡಿಕೊಳ್ಳುತ್ತಾನೆ. ಸ್ವಲ್ಪ ಹೊತ್ತಿಗೆ ಡಿಶೂಂ ಡಿಶೂಂ ಸದ್ದು ಕೇಳಿ ಬರುತ್ತದೆ. ಮಂಗೀಶ್ ಮುಖ ಅರಳುತ್ತದೆ. ‘ಸರಿಯಾಗಿ ಇಕ್ಕಿ, ಚೆನ್ನಾಗಿ ತದುಕಿ’ ಎಂದು ತನ್ನಲ್ಲೇ ಹೇಳಿಕೊಳ್ಳುತ್ತಾ ಮತ್ತೆ ಮಿಯಾಂದಾದ್ ಮಾದರಿಯಲ್ಲಿ ಹೈಜಂಪ್ ಮಾಡತೊಡಗುತ್ತಾನೆ. ಹಾಡಿನ ಭಾಗ ಕಂಟಿನ್ಯೂ ಆಗುತ್ತದೆ.)

ಮಂಗೀಶ್: ನಾನು ಸೂ.....ಪರ್ ಮಂಗ
ನಾನು ಸೂಪರ್ ಡೂಪರ್ ಮಂಗ

ಸಿಕ್ಕಾಪಟ್ಟೆ ಸ್ಕೆಚ್ಚಾಕ್ಬುಟ್ಟೆ
ಕಚ್ಡಾ ಮೇಲು ಕಳ್ಸೇ ಬುಟ್ಟೆ /೨/
ಐ ಸೆಂಟ್ ಇಟ್ /೨/


(ಚರಣ) ಮಂಗೀಶ್: ಕಚ್ಡಾ ಮೇಲನ್ನ ಕಳ್ಸಿದ್ ಮೇಲ್ ನನ್ನ
ಚಚ್ಚೇ ಬಿಟ್ಟ ಸಿಕ್ಸರ್ ಬಾರ‍್ಸೇ ಬಿಟ್ಟ
ನನ್ನ ಬಣ್ಣಾನ ಬಯಲು ಮಾಡ್ದೋನ್ನ
ಬಿಡ್ಲೇಬಾರ‍್ದು ಸುಮ್ನೇ ಬಿಡ್ಲೇ ಬಾರ‍್ದು

ಹಂಗಂತ ಸ್ಕೆಚ್ಚಾಕಿ ಹೆಂಗೆಂಗೋ ಹೊಂಚಾಕಿ
ಗ್ಯಾಂಗನ್ನ ಸೇರ‍್ಸೇ ಬಿಟ್ಟೆ
ಮರೆಯಲ್ಲೇ ನಿಂತ್ಕಂಡು ತಲೆಯೆಲ್ಲಾ ಕೆರ‍್ಕಂಡು
ಬಾರ‍್ಸಕ್ಕೆ ಕಳ್ಸೇ ಬಿಟ್ಟೆ

ನಾನು ಸೂ....ಪರ್ ಮಂಗ
ನಾನು ಸೂಪರ್ ಡೂಪರ್ ಮಂಗ

ಸಿಕ್ಕಾಪಟ್ಟೆ ಸ್ಕೆಚ್ಚಾಕ್‌ಬುಟ್ಟೆ
ಗ್ಯಾಂಗು ಕಳ್ಸಿ ಬಡ್ಸೇ ಬುಟ್ಟೆ /೨/
ಐ ಸೆಂಟ್ ಇಟ್ /೨/

(ಭಾರಿ ಹುರುಪಿನಿಂದ ಸೀರೆಯಲ್ಲೇ ಹೈಜಂಪ್ ಮಾಡುತ್ತಿರುವಾಗ, ಗ್ಯಾಂಗಿನವನೊಬ್ಬ ರಪ್ಪನೆ ಬಂದು ಬೀಳುತ್ತಾನೆ. ಹಾಡು ನಿಲ್ಲುತ್ತದೆ. ಮುಖ, ಕೈಕಾಲುಗಳೆಲ್ಲಾ ಊದಿಕೊಂಡಿರುತ್ತದೆ. ಮಂಗೀಶ್ ಕಕ್ಕಾಬಿಕ್ಕಿಯಾಗುತ್ತದೆ. ದಿಗ್ಭ್ರಮೆಯಿಂದ ಏನಾಯಿತು? ಎಂದು ಪ್ರಶ್ನಿಸುತ್ತಾನೆ.

ಒಬ್ಬ: ಅಯ್ಯೋ ಯಾಕೆ ಹೇಳ್ತೀರಾ ಬಾಸು. ಮೊದಲೇ ಆತ ಹಿಂಗೆ ಅಂತ ಹೇಳಕ್ಕಿಲ್ವಾ ಬಾಸು....

(ಮಂಗೀಶ್ ಬಂಡೆಯ ತುದಿಗೆ ಮೆಲ್ಲಗೆ ಹೋಗಿ ಟಾಪ್ ಆಂಗಲ್‌ನಿಂದ ವೀಕ್ಷಿಸುತ್ತಾನೆ. ಅಲ್ಲಿ ನೋಡಿದರೆ...! ಪರಿಸ್ಥಿತಿ ಮಂಗೀಶನ ನಿರೀಕ್ಷಿಗೆ ತದ್ವಿರುದ್ಧವಾಗಿರುತ್ತದೆ. ಎಲ್ಲಾ ಅಯ್ಯಯ್ಯೋ ಅಮ್ಮಮ್ಮಾ ಎನ್ನುತ್ತಾ ದಿಕ್ಕಾಪಾಲಾಗುತ್ತಿರುತ್ತಾರೆ. ಮಂಗೀಶ್ ಎದೆ ಬಡಿದುಕೊಳ್ಳುತ್ತಾ ‘ಫೇರ್ ಈಸ್ ಫೌಲ್ ಫೌಲ್ ಈಸ್ ಫೇರ್’ ಎಂದುಕೊಳ್ಳುತ್ತಾನೆ.)

ಒಬ್ಬ: ಆಯಾಸದಿಂದ ಬಾಸು ನಿಮಗೆ ಇದು ಚಿಟಿಕೆ ಹೊಡೆದಷ್ಟು ಸುಲಭ. ಹೋಗಿ ಬಾಸು, ನಮ್ಮ ಹುಡುಗರನ್ನು ಉಳಿಸಿ... (ಎನ್ನುತ್ತಾ ಅತ್ತ ತಿರುಗಿದರೆ, ಮಂಗೀಶ್ ಸೀರೆ ಎತ್ತಿ ಕಟ್ಟಿಕೊಳ್ಳುತ್ತಾ ತಲೆ ತಪ್ಪಿಸಿಕೊಳ್ಳಲು ಓಡುತ್ತಿರುತ್ತಾನೆ.
ಬಾಸು... ಬಾಸು... ಎಂದು ಕೂಗಿದರೆ ಮಂಗೀಶ್‌ನ ಓಟದ ವೇಗ ಇನ್ನೂ ಹೆಚ್ಚಾಗುತ್ತದೆ. ಕ್ಯಾಮರಾ ಫಾಲೋಸ್ ಮಂಗೀಶ್’ ಬ್ಯಾಕ್)

(ಮಂಗೀಶ್ ಹಿಂದೆ ತಿರುಗಿ ನೋಡುತ್ತಾ, ಫೇರ್ ಈಸ್ ಫೌಲ್ ಹೇಳಿಕೊಳ್ಳುತ್ತಾ ಓಡುತ್ತಲೇ ಇರುತ್ತಾನೆ. ಒಂದು ಒದೆ ಬೀಳುತ್ತದೆ. ಮಂಗೀಶ್ ಉರುಳಿ ಬೀಳುತ್ತಾನೆ. ಮುಖ, ಕೈಕಾಲುಗಳ ಮೇಲೆಲ್ಲಾ ಒದೆಗಳು ಬೀಳತೊಡಗುತ್ತವೆ. ಮಂಗೀಶ್ ಅಯ್ಯಯ್ಯೋ ಎಂದು ಅರಚಿಕೊಳ್ಳುತ್ತಾ ಸ್ಟಾಪ್ ಇಟ್ ಸ್ಟಾಪ್ ಇಟ್ ಎಂದು ಅಂಗಲಾಚತೊಡಗುತ್ತಾನೆ. ಕಟ್ ಟು)



ದೃಶ್ಯ-೨
ರಾತ್ರಿ. ಮಂಗೀಶನ ಮನೆಯ ಬೆಡ್ ರೂಂ

(ಹಾಸಿಗೆ ಮೇಲೆ ಮಂಗೀಶ್ ನಿದ್ದೆಯಲ್ಲೇ ಸ್ಟಾಪ್‌ಇಟ್ ಎಂದು ಕಿರುಚುತ್ತಿರುತ್ತಾನೆ. ಎರಡು ಚೊಂಬಿನಿಂದ ನೀರು
ಕ್ರಮವಾಗಿ ಆತನ ತಲೆ ಮತ್ತು ಮುಖದ ಮೇಲೆ ಸುರಿಯಲಾಗುತ್ತದೆ. ಮಂಗೀಶ್ ಆತಂಕದಿಂದ ಎದ್ದು ಕೂರುತ್ತಾನೆ. ಸ್ಟಾಪ್ ಇಟ್ ಸ್ಟಾಪ್ ಇಟ್ ಎನ್ನುತ್ತಾನೆ. ನಿಧಾನವಾಗಿ ಝೂಮ್‌ಔಟ್ ಆದಾಗ ಮೇಮ್ ಸಾಬ್ ನಿಂತಿರುತ್ತಾರೆ).
ಮೇಮ್‌ಸಾಬ್: ಇವತ್ತು ಕೂಡಾ ಕೆಟ್ ಕನಸು ಬಿತ್ತೇ?

ಮಂಗೀಶ್: (ಮುಖ ವರೆಸಿಕೊಳ್ಳುತ್ತಾ) (ನಡೆದುದೆಲ್ಲಾ ಕನಸು ಎಂದು ಗೊತ್ತಾಗಿ ಆದರೂ ಅದನ್ನು ತೋರಿಸಿಕೊಳ್ಳದೆ)
ಛೇ ಛೇ ಇನ್‌ಸಲ್ಟ್. ಅದು... ಏನಾಯ್ತು ಅಂದ್ರೆ... ಥೇಮ್ಸ್ ಯುನಿವರ್ಸಿಟಿಯವ್ರು ನನಗೆ ಡಾಕ್ಟರೇಟ್ ಕೊಡ್ತಾ ಇದ್ರು. ಎಲ್ಲರೂ ಬಂದು ಶೇಕ್‌ಹ್ಯಾಂಡ್ ಮಾಡಿದ್ದೇ ಮಾಡಿದ್ದು. ಅದಕ್ಕೇ ಸ್ಟಾಪ್‌ಇಟ್ ಸ್ಟಾಪ್ ಇಟ್ ಅಂದದ್ದು. (ಎನ್ನುತ್ತಾ ಮುಖ ವರೆಸಿಕೊಳ್ಳುತ್ತಾನೆ).

ಮೇಮ್‌ಸಾಬ್: ಅವರೇಕೆ ನಿಮಗೆ ಡಾಕ್ಟರೇಟ್ ಕೊಡುತ್ತಾರೆ?

ಮಂಗೀಶ್: ಛೇ ಇನ್‌ಸಲ್ಟ್ ಇನ್‌ಸಲ್ಟ್ (ಎಂದು ಫಕಫಕನೇ ನಗುತ್ತಾ, ಮರುಕ್ಷಣವೇ ಫಕ್ಕುಫಕ್ಕು ಎಂದು ಬಿಕ್ಕಳಿಸುತ್ತಾ) ‘ಇಂಗ್ಲೀಷ್ ಭಾಷೆಯ ಸಂಸ್ಕೃತ ಪದಗಳು’ ಎಂಬ ಥೀಸಿಸ್ ಬರಿತಿಲ್ಲವಾ ಅದಕ್ಕೆ...

ಮೇಮ್‌ಸಾಬ್: ಹೋಗಲಿ ಈಗ ಮಲಗಿಕೊಳ್ಳಿ

ಮಂಗೀಶ್: ಅದೂ ಅಲ್ಲದೆ ನಾನು ಜಗತ್ತಿನ ಅತಿ ಕೆಟ್ಟ ಬ್ಲಾಗು ಯಾವುದು ಅಂತ ಸಂಶೋಧನೆ ಮಾಡಿದೀನಿ. ಇದಕ್ಕೆ ಲಾರ್ಡ್ಸ್ ಯುನಿವೆರ್ಸಿಟಿಯವರು ಸದ್ಯದಲ್ಲೇ ಆಸ್ಕರ್ ಅವಾರ್ಡ್ ಕೊಡ್ತಾರೆ, ಏನ್ ತಿಳ್ಕಂಡಿದೀ...

ಮೇಮ್‌ಸಾಬ್: ಹೋಗಲಿ ಈಗ ಮಲಗಿಕೊಳ್ಳಿ (ಎಂದು ಪಕ್ಕದಲ್ಲಿ ಚೊಂಬು ಇಟ್ಟು ನಿರ್ಗಮಿಸುತ್ತಾರೆ).

ಮಂಗೀಶ್ ಕಣ್ಣುಮುಚ್ಚಿದರೆ ಒದೆ ಬೀಳುವುದೇ ಫೀಲ್ ಆಗಿ ಎದ್ದು ಕೂರುತ್ತಾನೆ. ಅತ್ತಿಂದಿತ್ತ ಓಡಾಡಿ ಕೊನೆಗೆ ಮೇಜಿನ ಕೆಳಗಿಂದ ಸೈನ್‌ಬೋರ್ಡ್ ಒಂದನ್ನು ತೆಗೆಯುತ್ತಾನೆ. (ಸೈನ್‌ಬೋರ್ಡ್ ಮೇಲೆ ಝೂಮ್.
ಡಾ. ಠುಸ್ ಮಂಗೀಶ್
ಫೀಮೇಲ್ ಐಡಿಯಿಂದ ಕಳ್ಳ ಮೇಲ್ ಕಳಿಸಲು ಇಲ್ಲಿ ಸಂಪರ್ಕಿಸಿ
(ದಾಸವಾಳ ಫ್ರೀ)
ಎಂದು ಬರೆಯಲಾಗಿರುತ್ತದೆ. ಮಂಗೀಶ್ ಮೆಲ್ಲಗೆ ಬೋರ್ಡನ್ನು ತೆಗೆದು ಮನೆಯ ಹೊರಗೆ ಬಂದು ಮೇನ್‌ಡೋರ್ ಬಳಿ ತೂಗುಹಾಕತೊಡಗುತ್ತಾನೆ.

ಮಂಗೀಶ್: (ಸ್ವಗತ) ಇದರಲ್ಲೇ ಸಾಕಷ್ಟು ದುಡೀಬಹುದು. ಜನ ಬಂದು ಕ್ಯೂ ನಿಲ್ಲಬೇಕು ಹಂಗೆ ಮಾಡ್ತೀನಿ... (ಎನ್ನುತ್ತಾ ಚಿಟಿಕೆ ಹೊಡೆಯುತ್ತಾನೆ. ಅಷ್ಟರಲ್ಲಿ ಪಂಚರಂಗಿ ಹಾಡಿನ ಬಿಜಿಎಂ ಬರುತ್ತದೆ. ಮಂಗೀಶ್ ಕುಪ್ಪಳಿಸತೊಡಗುತ್ತಾನೆ.)

ಸಾಂಗ್ ನಂಬರ್-೨

ಚಿಟಿಕೆ ಹೊಡೆದು ಗಲ್ಲಾ ಕೆರೆದು
ಸ್ಟಾಂಡಿಂಗ್ ಕಮಿಟಿ ಮೀಟಿಂಗ್ ಕರೆದು
ತನ್ನ ಬೆನ್ನು ತಾನೇ ತಟ್ಕೋ ಲೈಫು ಇಷ್ಟೇನೆ
ಪಂಚಮಂಗಿ ಪಾಂ ಪಾಂ

ಒಳ್ಳೇ ಹ್ಯಾಂಡ್‌ಗಳ ಕೆಲಸ ಕೀಳು
ಬಂದು ಬಂದ್ರೆ ಚುಟ್ಟಿ ಕೇಳು
ಝಾಡಿಸಿ ಒದ್ರೆ ಹೈಜಂಪ್ ಮಾಡು ಲೈಫು ಇಷ್ಟೇನೆ
ಪಂಚಮಂಗಿ ಪಾಂ ಪಾಂ

ಫೀಮೇಲ್ ಐಡಿ ಓಪನ್ ಮಾಡಿ
ಕಚ್ಡಾ ಮೇಲು ಸೀಸಿ ಮಾಡಿ
ಆಮೇಲೇನೂ ಗೊತ್ತಿಲ್ಲಾನ್ನು ಲೈಫು ಇಷ್ಟೇನೆ
ಪಂಚಮಂಗಿ ಪಾಂ ಪಾಂ

ಮಾನ, ಗೀನ ಎಲ್ಲಾ ಬಿಸಾಕು
ಬಡ್ಸೋದಕ್ಕೆ ಸ್ಕೆಚ್ಚು ಹಾಕು
ಸ್ಕೆಚ್ಚು ಉಲ್ಟಾ ಆದ್ರೆ ಬಿಕ್ಕು ಲೈಫು ಇಷ್ಟೇನೆ
ಪಂಚಮಂಗಿ ಪಾಂ ಪಾಂ

ಗಾಂಧಿಬಜಾರ್ ನ ಲಿಂಕು ಪಡ್ಕೋ
ಮಸ್ಕಾ ಹೊಡ್ದು ಬಕೀಟು ಹಿಡ್ಕೋ
ಅಕೆಡೆಮಿಯಲ್ಲಿ ಅವಾರ್ಡು ಹೊಡ್ಕೋ ಲೈಫು ಇಷ್ಟೇನೆ
ಪಂಚಮಂಗಿ ಪಾಂ ಪಾಂ

ಮೊಣಕಾಲಿರುವುದು ಕುಪ್ಪಳಿಸೋಕೆ
ಗಂಟಲು ಇರುವುದು ಬಿಕ್ಕಳಿಸೋಕೆ
ಆಗೋದೆಲ್ಲಾ ಒಳ್ಳೇದಕ್ಕೆ ಲೈಫು ಇಷ್ಟೇನೆ
ಪಂಚಮಂಗಿ ಪಾಂ ಪಾಂ

ಏನೆ ಬರಲಿ ಏನೆ ಹೋಗ್ಲಿ ಲೈಫು ಇಷ್ಟೇನೆ
ಎಷ್ಟೇ ಬ್ಲಾಗು ಬರೆದರೂನು ಮಂಗ ಹಂಗೇನೆ...

ಕರಕರ ಕಿರಿಕಿರಿ ಅಯ್ಯಯ್ಯಪ್ಪೋ
ರಪರಪ ಬೆನ್‌ತಟ್ಕೋ ದಬದಬ್ಬೋ
ಕಚಕಚ ಸ್ಕೆಚ್‌ಹಾಕು ಅರರಬ್ಬೋ
ಚಕಚಕ ಉಲ್ಟಾಆದ್ರೆ ಲಬಲಬ್ಬೋ ಲಬ ಲಬಲಬ್ಬೋ

ಲೈಫು ಇಷ್ಟೇನೆ, ಮಂಗ ಹಂಗೇನೆ

(ಹಾಡು ನಿಧಾನವಾಗುತ್ತಿದ್ದಂತೆಯೇ ಬೀಟ್ ಪೊಲೀಸ್ ಅಥವಾ ಗೂರ್ಖಾನೊಬ್ಬನ ಬೂಟಿನ ಸದ್ದು ಕೇಳಿ ಬರುತ್ತದೆ. ಮಂಗೀಶ್ ಭಯಗ್ರಸ್ತನಾಗಿ ಕೂಡಲೇ ಸೈನ್ ಬೋರ್ಡ್ ಬಿಸುಟು ಧಢಾರನೆ ಬೆಡ್‌ರೂಂನೊಳಗೆ ಓಡಿಬಂದು ಕಂಬಳಿ ಹೊದ್ದು ಎದೆ ಬಡಿದುಕೊಂಡು ಮೆಲ್ಲಗೆ ‘ಫೇರ್ ಈಸ್ ಫೌಲ್’ ಹೇಳಿಕೊಳ್ಳುತ್ತಾನೆ. ನಂತರ ಪಿಸುದನಿಯಲ್ಲಿ ‘ಹಿಂದೆಗಡೆ ನೀವೆಲ್ಲಾ ಏನು ಮಾಡ್ತಾ ಇದ್ದೀರಿ ನನಗೆ ಗೊತ್ತಿದೆ. ಧೈರ್ಯ ಇದ್ದರೆ ಎದುರಿಗೆ ಬರ್ರಲೇ’ ಎನ್ನುತ್ತಾ ಮುಸುಕಿನೊಳಗೆಯೇ ಹಾಗೇ ನಿದ್ದೆ ಹೋಗುತ್ತಾನೆ).
(ಕ್ಯಾಮರಾ ಪ್ಯಾನ್ಸ್ ಅಟ್ ಮೇಮ್‌ಸಾಬ್. ಅವರು ಫೋನ್‌ನಲ್ಲಿ ಮಾತನಾಡುತ್ತಿರುತ್ತಾರೆ)
ಮೇಮ್‌ಸಾಬ್: ...ಪರಿಸ್ಥಿತಿ ತುಂಬಾ ಸೀರೀಯಸ್ ಆಗಿದೆ... ಹಾಂ ಹೌದು ಹೌದು... ತುಂಬಾ ಸಲ ಕುಪ್ಪಳಿಸುತ್ತಾ ಹೈಜಂಪ್ ಮಾಡುತ್ತಾರೆ. ಈ ಕ್ಷಣ ಫಕಫಕನೇ ನಗುತ್ತಾರೆ ಮರುಕ್ಷಣವೇ ಫಕ್ಕುಫಕ್ಕು ಅಂತ ಬಿಕ್ಕಳಿಸುತ್ತಾರೆ... ಏನು ಮಾಡೋದು ತೋಚುತ್ತಿಲ್ಲ...

(ಅತ್ತಲಿಂದ ಬಾಲಿಕೆಯೊಬ್ಬಳ ದನಿ): ಒಂದು ಕೆಲಸ ಮಾಡೋಣ. .. ನನಗೆ ಒಬ್ಬರು ಗೊತ್ತಿದ್ದಾರೆ ಡಾ. ಪ್ರಧಾನ್ ಅಂತ. ಅವರಲ್ಲಿಗೆ ಕರೆದುಕೊಂಡು ಹೋದರೆ ಹೇಗೆ?...

(ಕ್ಯಾಮರಾ ಝೂಮ್ಸ್ ಅಟ್ ಮೇಮ್‌ಸಾಬ್)



ದೃಶ್ಯ-೩
ಹಗಲು, ಇನ್‌ಡೋರ್ಸ್ ನಿಮ್ಹಾನ್ಸ್

(ನಿರೀಕ್ಷಿಸಿ...)

Wednesday, 26 January 2011

ಮಂಗನ ಸಂಗ, ಅಭಿಮಾನ ಭಂಗ

ಹೀಗೊಂದು ಆಧುನಿಕ ವೃತ್ತಾಂತವು...

(ಟೀಕಾಚಾರ್ಯರ ಒತ್ತಾಯದ ಮೇರೆಗೆ ಪರಿಷ್ಕರಿಸಲಾಗಿದೆ)


ಒಂದು ಊರಿನಲ್ಲಿ ದಂಡ-ಕಮಂಡಲ ಇಲ್ಲದ ಒಬ್ಬ ತರುಣ ಋಷಿಮುನಿ ಇದ್ದನಂತೆ. "ಏನ್ ಸುಮ್ಮನೆ ಇದ್ದೀಯ? `ಅಲ್ಪನ ಸಂಗ-ಅಭಿಮಾನ ಭಂಗ' ಎಂಬ ಗಾದೆಮಾತಿನ ಸಾರ ತಿಳಿದು ಬಾ. ಅದೇ ನಿನ್ನ ತಪಸ್ಸಾಧನೆ" ಅಂತ ಗುರುಮುನಿ ಗದರಿದ್ದೇ ತಡ ವೇಷ ಮರೆಸಿಕೊಂಡು ಹೊರಟೇಬಿಟ್ಟ ದೇಶಾಂತರ ಋಷಿಮುನಿ.

ಗೊತ್ತುಗುರಿ ಇಲ್ಲದ ಊರಿನ ಚೌಕಕ್ಕೆ ಹೋದರೆ, ಅಲ್ಲಿ ಮಂಗಣ್ಣನೊಬ್ಬ ಕನ್ನಡಕ ಸರಿ ಮಾಡಿಕೊಳ್ಳುತ್ತಾ, ದಾರಿಹೋಕರನ್ನು ಚಿಟಿಕೆ ಹೊಡೆದು ಕರೆಯುತ್ತಾ, "ರೀ ಮಿಸ್ಟರ್, ನಾನು ಲಂಡನ್ಗೆ ಹೋಗಿ ಬಂದಿದೀನಿ ಗೊತ್ತಾ? ಏನ್ ತಿಳ್ಕಂಡಿದೀರಿ ನನ್ನ..." ಎಂದು ಗಾಳಿ ಬಿಡುತ್ತಿದ್ದುದು ಕಂಡಿತು.

ಸದರಿ ಮಂಗಣ್ಣನ ಪೂರ್ವಾಶ್ರಮದ ಬಗ್ಗೆ ಹೇಳುವುದಾದರೆ: ನಿಮಿಷಕ್ಕೆ ಸರಾಸರಿ 28 ಸುಳ್ಳು ಹೇಳುವ ಕಲೆಯನ್ನು ಈತ ಕಲಿತದ್ದು ಚಿಕ್ಕಂದಿನಲ್ಲೇ ಆದರೂ, ಚಿಟಿಕೆ ಹೊಡೆದು ಕರೆಯುವ ಕೌಶಲ್ಯ ರೂಢಿಸಿಕೊಂಡಿದ್ದು ಮಾತ್ರ ತಟ್ಟೆ-ಲೋಟ ತೊಳೆಯುತ್ತಿದ್ದ ದಿನಗಳಲ್ಲಿ. ಒಮ್ಮೆ ಅಮಾಯಕ ಹುಂಜವೊಂದು ಕಂಡಿದ್ದೇ ತಡ ಲಬಕ್ಕನೆ ಚಿಟಿಕೆ ಹೊಡೆಯುತ್ತಾ, ನಿರುಪದ್ರವಿ ಊರೊಂದಕ್ಕೆ ನುಗ್ಗಿದ ಆತ "ನೋಡ್ರಿ ದಿನ ಬೆಳಗಾದರೆ ಸೂರ್ಯ ಹುಟ್ಟೋದೆ ನನ್ನ ಹುಂಜ ಕೂಗೋದರಿಂದ" ಅಂತ ನಂಬಿಸಿ ವಂತಿಗೆ ವಸೂಲಿ ಮಾಡುತ್ತಿದ್ದನಂತೆ. ಇವನ ರಿಕಿರಿಕಿ ತಾಳದೆ ಪಾಪ ಹುಂಜ ಕಣ್ಮುಚ್ಚಿತು. ಆಮೇಲೆ ಕೂಡಾ ಸೂರ್ಯ ಹುಟ್ಟುತ್ತಲೇ ಇದ್ದನಲ್ಲಾ? ಆಗ ಮತ್ತೊಂದು ಐಡಿಯಾ ಮಾಡಿದ ಆತ, "ಏನು ತಿಳ್ಕಂಡಿದೀರಿ? ನನ್ಹುಂಜ ಇಲ್ದೇ ಇರುವಾಗ ಕೂಡಾ ಹುಟ್ಟೋ ಥರ ಸೂರ್ಯಂಗೆ ಟ್ರೈನಿಂಗ್ ಕೊಟ್ಟಿದ್ದೇ ನಾನು. ಕೊಡ್ರಿ ಟ್ರೈನಿಂಗ್ ಫೀಜು..." ಎಂದು ವಸೂಲಿ ಮುಂದುವರಿಸಿದನಂತೆ.

ಇಂಥಾ ಖ್ಯಾತಿಯ ಮಂಗಣ್ಣ, ಕೈಕಟ್ಟಿ ನಿಂತಿದ್ದ ಮಾರುವೇಷದ ಮುನಿಯನ್ನು ಕಂಡಿದ್ದೇ ತಡ ಚಿಟಿಕೆ ಹೊಡೆಯುತ್ತಾ, "ಅಂಗಣ್ಣಾ, ಹಿಂಗಣ್ಣಾ ನನ್ ಜೊತೆ ಬರ್ರಣ್ಣಾ... ಅರಮನೆ ಕುದುರೆ ಮೇಯ್ಸಣಾ... ಕೈತುಂಬಾ ಕೊಡುಸ್ತೀನಿ ಝಣ್ ಝಣಾ... ನಾನ್ಯಾರ್ ಗೊತ್ತಲ್ಲಾ, ಲಂಡನ್ ಮಂಗಣ್ಣಾ..." ಎಂದು ಬಲೂನು ಊದತೊಡಗಿದ. `ಇದೊಳ್ಳೆ ತಮಾಷೆ ಐತಲ್ಲಾ. ಸರಿ, ನೋಡೇ ಬಿಡೋಣ ನಡಿ' ಅಂತ ಋಷಿಮುನಿ ಸುಮ್ಮನಿರದೆ ಅತ್ತ ಹೆಜ್ಜೆ ಹಾಕಿ, ಹಗಲು-ರಾತ್ರಿ ಪಿಳ್ಳಂಗೋವಿ ಊದುತ್ತಾ ಕುದುರೆ ಮೇಯ್ಸತೊಡಗಿದನೋ ಇಲ್ಲವೋ...

ಇತ್ತ ಕತ್ತೆ-ಕುದುರೆ ಭೇದವಿಲ್ಲದೆ ಎಲ್ಲಿ ಸಿಕ್ಕಿದರಲ್ಲಿ `ಲಂಡನ್ ಮಂಗಣ್, ಲಂಡನ್ ಮಂಗಣ್...' ಅಂತ ತನ್ನದೇ ಹೆಸರಿನ ಶಿಲಾಶಾಸನ ಕೆತ್ತಲು ಶುರು ಮಾಡಿದ ಮಂಗಣ್ಣ, ನಡುನಡುವೆ ಕೆತ್ತೋದು ನಿಲ್ಲಿಸಿ,

ನನ್ ಹತ್ರ ತಲೆ ಬಗ್ಸುದ್ರೆ

ಕತ್ತೇನ್ ಮಾಡ್ತೀನಿ ಕುದ್ರೆ,

ನನ್ಗೇನಾರ ಝಾಡ್ಸುದ್ರೆ

ಕುದ್ರೇನ್ ಮಾಡ್ತೀನಿ ಕತ್ತೆ

ಅಂತ ಗಲ್ಲ ಕೆರೆದುಕೊಳ್ಳುತ್ತಾ ಇಕಿಲತೊಡಗಿದ.

ಆನಂತರ, ತನ್ನ ಖಾಸಾ ಮಾರ್ಗದ ಮುಖೇನ ಸಾಲುಸಾಲಾಗಿ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದ ಮಂಗಣ್ಣ, ದಿನಬೆಳಗಾದರೆ ಎಲ್ರನ್ನೂ ಎದುರುಗಡೆ ಕೂಡ್ರಿಸಿಕೊಂಡು, "ಏನ್ ಹಂಗ್ ಕಣ್ ಬಿಡ್ತೀರಿ? ಏಳೇಳ್ ಜಲ್ಮ ಎತ್ತಿದ್ರೂ ನೀವಾರೂ ನನ್ ಥರ ಕುದ್ರೆ ಎಣಿಸಾಕಿಲ್ಲ, ಕತ್ತೆ ಮೇಯ್ಸಾಕಿಲ್ಲ... ಅಲ್ ಪಿಳ್ಳಂಗೋವಿ ಊದ್ತಾವ್ನಲ್ಲಾ ಅವ್ನೂ ನನ್ನಷ್ಟು ಫೇಮಸ್ಸಲ್ಲ ಗೊತ್ರಾ? ಕತ್ತೆ ಮೇಸೋದ್ರಲ್ಲಿ ಯಾರೂ ನನ್ನನ್ನ ಮೀರ್ಸದಿಲ್ಲಾ, ತಿಳೀತಾ? ನಾನ್ ಕಡಿದು ಗುಡ್ಡೆ ಹಾಕಿರಾದು ಹೇಳೋಕೆ ಹೋದ್ರೆ ಎಷ್ಟು ದಿನ ಬೇಕು ಗೊತ್ತೇ? ಅದು ಬಿಡ್ರಿ, ಮಂತ್ರಿ-ಮಹೋದಯರುಗಳು ನನ್ ಎಡಗಡೆ ಭುಜದ ಮೇಲೆ ಕೈ ಮಡಗವ್ರೇ;ಇತಿಹಾಸಕಾರರೆಲ್ಲಾ ನನ್ ಬಲಗಡೆ ಭುಜದ ಮೇಲೆ ಕೈ ಮಡಗವ್ರೇ; ಡೆರೆಕ್ಟರು, ಎಡಿಟರ್ ಗಳೆಲ್ಲಾ ನಂಗೆ ಕಾರಲ್ಲಿ ಬಂದ್ ಡ್ರಾಪ್ ಕೊಟ್ ಹೋಯ್ತರೆ. ಈಗ್ಲಾದ್ರೂ ಗೊತ್ತಾಯ್ತಾ ನಾನ್ ಎಷ್ಟು ಫೇಮಸ್ಸು? ಅದಿರ್ಲಿ. 'ಸಾ ನಮ್ ಕುರಿ ಮೇಯ್ಸ್ ಕೊಡಿ, ಸಾ ನಮ್ ಕತ್ತೆ ಮೇಯ್ಸ್ ಕೊಡಿ' ಅಂತ ಡೈಲಿ ಫೋನ್ ಮೇಲೆ ಫೋನು. ನಾನೇ ಹೋಗಿಲ್ಲ. ಈ ಕಮಿಂಟ್ ಮೆಂಟ್ ಇದೆಯೇನ್ರಿ ನಿಮಗೆ?..." ಎಂದು ಸಾಧು ಕಿಲಕಿಲ ಶೈಲಿಯಲ್ಲಿ ಪರಾಕು ಹಾಕಿಕೊಳ್ಳುವುದು ಈತನ ನಿತ್ಯಕರ್ಮವಾಯಿತು.

ದೇಶಾವರಿಯಂತೆ ದಳಪತಿಗಳು ಹುಲ್ಲುಗಾವಲು ಕಡೆ ಬಂದಾಗಲೆಲ್ಲಾ, ಕಾಲರ್ ಸರಿ ಮಾಡಿಕೊಳ್ತಾ ಎದ್ದು ನಿಲ್ತಿದ್ದ ಐನಾತಿ ಮಂಗಣ್ಣ, "ನಾನ್ ಏನ್ ಚೆನ್ನಾಗಿ ಕುದ್ರೆ ಮೇಯ್ಸತಾ ಇವ್ನಿ, ಏನ್ ಕತೆ. ನೋಡ್ರಿ, ಕುದ್ರೆ ಮೈಯಾದಿ ಮೈತುಂಬಾ ನನ್ ಹೆಸ್ರೇ ತುಂಬೋಗವೆ..." ಅಂತ ಸದರಿ ದಳಪತಿಗಳ ಕಿವಿಗೆ ದಾಸವಾಳ ಮುಡಿಸಿ; ಹಣೆ ಒರಸಿ ನಾಮ ಎಳೆಯುತ್ತಿದ್ದ. ಅಷ್ಟಕ್ಕೂ ಬಿಡದೆ, "ಕುದ್ರೆ ಮೇಯ್ಸಕೆ ನಾನ್ ಅಲ್ಲಿಗೋದೆ, ಇಲ್ಲಿಗ್ ಬಂದೆ; ಎಷ್ಟು ಓಡಾಡ್ಬುಟ್ಟೆ ಏನ್ ಕತೆ... ತೆಗೀರಿ ಟಿಎಡಿಎ ದುಡ್ಡು..." ಅಂತ ಸುಲಿಯತೊಡಗಿದ.

ಒಮ್ಮೆ ಇದ್ದಕ್ಕಿದ್ದಂತೆ ಚಿಂತೆಗೀಡಾದ ಮಂಗಣ್ಣ, 'ತಾನು ಇಷ್ಟೆಲ್ಲಾ ಫೇಮಸ್ಸು ಅಂತ ಬಾಯಿ ಹರಿದುಕೊಂಡು ಹೇಳ್ತಾ ಇದ್ರೂ ಸುಮ್ಕವಲ್ಲಾ ಹೆಣ್ಮಕ್ಳು, ಅಕಟಕಟಾ...' ಎಂದು ಹಣೆ ಬಡಿದುಕೊಂಡವನೇ ತುರ್ತಾಗಿ ಸ್ಟಾಂಡಿಂಗ್ ಕಮಿಟಿ ಮೀಟಿಂಗು ಕರೆದು: "ಏನ್ ತಿಳ್ಕಂಡಿದೀರಿ? ಸವರವ ಗಂಗೂಲಿ ಲಂಡನ್ ಮೈದಾನದಗೆ ಅಂಗಿ ಕಳಚಿ ರಗರಗ ತಿರುಗಿಸ್ತಿದ್ದನಲ್ಲಾ, ಆಗ ಹಿಂದಗಡೆ ದಪ್ಪಗೆ-ಕಪ್ಪಗೆ ನಿಂತಿದ್ದೋರು ಯಾರು? ನಾನೇ! ನಂಗೆ ಖಾವಂದರು ಕ್ಲೋಜು, ರೈ ಕ್ಲೋಜು, ಬಿಲ್ ಕುಲ್ ಕ್ಲಿಂಟನ್ ಭಾರಿ ಕ್ಲೋಜು. ರಾಜ್ದೀಪ್ ಸರ್ದೇಸಾಯಿಗೆ ಮೆಸೇಜ್ ಹಾಕಬಲ್ಲೆ, ರೇಣುಕಾಚಾರಿಗೆ ರಿಂಗ್ ಕೊಡಬಲ್ಲೆ... ಅದು ಬಿಡ್ರಿ. ದೊಡ್ದೊಡ್ಡೋರೆಲ್ಲಾ ನನ್ ನೋಡಿದ್ರೆ ಪ್ಯಾಂಟಗೆ ಎಲ್ಲಾ ಮಾಡ್ಕತಾರೆ, ಅಷ್ಟು ಭಯ ಮಡ್ಗಿದೀನಿ. ನನ್ ತಲೆ ಜ್ಞಾನದ ಕೊಪ್ಪರಿಕೆ, ನಾನ್ ಹೇಳ್ದಂಗ್ ಎಲ್ಲಾ ಕೇಳಿದ್ರೆ ಓಕೆ, ಇಲ್ದಿದ್ರೆ ಜೋಕೆ... ನಿಮ್ನೆಲ್ಲಾ ಸಾಲಾಗ್ ಕರಕೊಂಡ್ ಬಂದವನೇ ನಾನ್ ತಾನೆ? ನನ್ನನ್ನ ಎದಿರು ಹಾಕ್ಕಂಡ್ರೋ ಬೆಂಗ್ಳೂರಲ್ಲಿ ಓಡಾಡದ ಹಾಗೆ ಮಾಡಿಬಿಡ್ತೀನಿ, ಖಬರ್ದಾರ್..." ಎಂದು ಒಂದೇ ಸಮನೆ ಧಮಕಿ ಹಾಕಿದ. ಅಷ್ಟಕ್ಕೂ ಬಿಡದೆ:

ನಾನ್ ಕಪ್ ಕುದ್ರೇನ್ ಬಿಳಿ ಅಂದ್ರೆ

ಒಪ್ಬೇಕು ನೀವೆಲ್ಲಾ

ಬಿಳಿ ಕುದ್ರೇನ್ ಕಪ್ ಅಂದ್ರೂ

ತೆಪ್ಗಿರಬೇಕ್ ನೀವೆಲ್ಲಾ...

ಯಾಕಂದ್ರೆ ನಾನ್ ಪ್ರಶ್ನಾತೀತ... ಪ್ರಶ್ನಾತೀತಾ...

ಎಂದು ಥೇಟು ಜಾವೆದ್ ಮಿಯಾಂದಾದ್ ಸ್ಟೈಲಿನಲ್ಲಿ ಕುಪ್ಪಳಿಸತೊಡಗಿದ.

ಪ್ರಕಾರವಾಗಿ ಕಾಲ ಸರಿಯುತ್ತಿರುವಾಗ ಏನೋ ನೆನಪಾದಂತೆ ಬೆಚ್ಚಿ ಬಿದ್ದ ಆತ: 'ತಾನು ರೆಸ್ಟ್ ತಗೊಳ್ಳೋ ಟೇಮಲ್ಲಿ ಹುಲ್ಲುಗಾವ್ಲಲ್ಲಿ ಏನಾಗ್ತದೋ ಏನ್ಕತೆಯೋ? ಇಲ್ಲೀವರೆಗೆ ಊದಿದ್ ಬಲೂನಿಗೆ ಯಾವಾಗ ಯಾರ್ ಸೂಜಿ ಚುಚ್ತಾರೋ ಏನ್ಕತೆಯೋ...' ಅಂತ ಆತಂಕ ಮೂಡಿದ್ದೇ ತಡ, ನಂಬಿಕಸ್ಥ ಬಾಲಿಕೆಯೊಬ್ಬಳಿಗೆ ಗುಪ್ತಚರ ಕೆಲಸ ವಹಿಸಿದ. ಟೈಂ ಟು ಟೈಂ ವರದಿ ತರಿಸಿಕೊಂಡು ಅದಕ್ಕನುಸಾರ ರಿಕಿರಿಕಿ ಕೊಡುವ ಹೊಸ ವರಸೆ ಶುರುಮಾಡಿ, 'ಭಲಲೈ ಸಾರಥಿ' ಎಂದು ಬೆನ್ನು ಚಪ್ಪರಿಸಿಕೊಳ್ಳತೊಡಗಿದ.

ಹೀಗೆ ಮಂಗಣ್ಣ ತಟ್ಟಿಕೊಳ್ಳುವ ಬೆನ್ನಿನ ರಭಸಕ್ಕೆ ಬೆಚ್ಚಿ ಕೆಲವರು ಜಾಗ ಖಾಲಿ ಮಾಡಿದರೆ; ರಿಕಿರಿಕಿ ತಾಳದೆ ಪೇರಿ ಕಿತ್ತವರು ಮತ್ತೆ ಹಲವರು.

ಇಷ್ಟೆಲ್ಲವನ್ನೂ ನೋಡುವವರೆಗೆ ನೋಡಿದ ಋಷಿಮುನಿ, ಪಿಳ್ಳಂಗೋವಿ ಪಕ್ಕಕ್ಕಿಟ್ಟು, ಒಮ್ಮೆ ನಿಟ್ಟುಸಿರು ಬಿಟ್ಟು, ಸುಮ್ಮನೆ ಒಂದು ಕುದುರೆ ಕಿವಿ ಹಿಂಡಿದ ಅಷ್ಟೇ.ಅದೊಮ್ಮೆ ಕೆನಲಿ ಹಿಂಗಾಲು ಝಾಡಿಸಿ ಒದ್ದ ರಭಸಕ್ಕೆ ಕುಂಯ್ ಅಂತಾ ಠುಸ್ಸಾಯಿತು ಬಲೂನು.

ಸದ್ದು ಕೇಳಿ ಬಂದ ದಳಪತಿ ಎಲ್ಲವನ್ನೂ ಗ್ರಹಿಸಿ ತಬ್ಬಿಬ್ಬಾಗಿ, "ಒಂದು ಬಲೂನು ಚುಚ್ಚೋಕೆ ಇಷ್ಟು ದಿನ ಬೇಕಾಯ್ತಾ ನಿನಗೆ...? ಸರಿ ನಡೀ ಇನ್ನ" ಎಂದು ಗದರಿದ. ಚೌಕ ಕೊಡವಿಕೊಂಡು ಎದ್ದ ಋಷಿಮುನಿ, ಅರಿವಾದ ಗಾದೆಮಾತಿನ ಸಾರದ ಚಿಂತನೆಯಲ್ಲಿ ತೊಡಗಿ, ಮರುಕ್ಷಣವೇ ಗುಪ್ತಚರ ವಿಭಾಗದ ಪರಿಸ್ಥಿತಿಗೆ ಮರುಗಿ, ಓಲೆಗರಿಯೊಂದನ್ನು ಹಿರಿದು:

ತೆಳು ಹುಡುಗಿಯು

ಬಿಳಿ ಬೆಡಗಿಯು

ತಳಹಿಡಿದಳು ಏತಕೆ?

ಖಳ ದುರುಳನ

ಬಳಿ ಸಾರುತ

ಕಳಕೊಂಡಳು ಸ್ವಂತಿಕೆ...

ಎಂಬ ಷಟ್ಪದಿ ಹೊಸೆದವನೇ ಹೊಸ ದೇಶಾಂತರಕ್ಕೆ ಹೆಜ್ಜೆ ಹಾಕಿದ...

ಇತ್ತ ಗಲ್ಲ ಕೆರೆದುಕೊಳ್ಳುವ ಮಂಗಣ್ಣನನ್ನು ಯಾರಾದರೂ, "ಇದೇನ್ರೀ ಮಂಗೀಶ್, ಬಲೂನು ಠುಸ್ಸಾಗಿದೆ?" ಎಂದು ಪ್ರಶ್ನಿಸಿದಲ್ಲಿ;

"ಹಿಹ್ಹಿಹ್ಹಿ, ಹಾಗೇನಿಲ್ಲ.ಹೆಚ್ಚಿನ ಪಕ್ಷ ನಾನೇ ಗಾಳಿಬಿಟ್ಟದ್ದು... ಅಂದಹಾಗೆ ಯು ನೋ, ಕಾಲದಲ್ಲಿ ಯಾರನ್ನೂ ನಂಬೋಹಾಗಿಲ್ಲ..." ಎನ್ನುತ್ತಾ ಹೊಸ ಬಲೂನು ಊದತೊಡಗಿದನಂತೆ.

"ನಿಮ್ಮ ಮುಂದಿನ ಹೆಜ್ಜೆ?" ಎಂದು ಕೇಳಿದರೆ,

"ಅಯ್ಯೋ ಭಾರಿ ಡಿಮಾಂಡು ಕಣ್ರೀ. ಮಾಧ್ಯಮ ಸಲಹೆಗಾರ ಆಗು ಅಂತ ಡೈಲಿ ಫೋನ್ ಮೇಲೆ ಫೋನು. ನಾನೇ ಏನೂ ಹೇಳಿಲ್ಲ..."

"ಹಾಗೇನಾದರೂ ಆದರೆ ನಿಮ್ಮ ಯೋಜನೆಗಳು?"

"ನೋಡ್ತಿರಿ. ಮುಷ್ಕರ, ಬಂದ್, ಕರ್ಫ್ಯೂ, ನಿಷೇಧಾಜ್ಞೆ ಇತ್ಯಾದಿ ದಿನಗಳಂದು ಪತ್ರಕರ್ತರಿಗೆ ಸಾರ್ವತ್ರಿಕ ರಜೆ ಘೋಷಿಸುವ ಅಮೂಲ್ಯ ಸಲಹೆ ನೀಡ್ತೇನೆ. ಏನ್ ತಿಳ್ಕಂಡಿದೀರಿ..."

...ಎಂದು ಮುಂತಾಗಿ ಮಾತುಕತೆಗಳು ಮುಂದುವರಿದವು ಎಂಬಲ್ಲಿಗೆ ಮಂಗೀಶ ವೃತ್ತಾಂತದ ಪ್ರಥಮಾಧ್ಯಾಯವು ಪರಿಸಮಾಪ್ತಿಯಾದುದು.

Friday, 11 June 2010

ಶರಧಿಯನೆದುರಿಸಿ ಬದುಕಿದವರುಂಟೆ?

"ನಿಮ್ಮಲ್ಲಿ ಯಾರಿಗೂ ಬ್ಲಾಗ್ ಬರೆಯುವ ಅಭ್ಯಾಸವಿಲ್ಲವೇ" ಎಂಬ ಅಮಾಯಕ ಪ್ರಶ್ನೆಯ ಚಾಟಿಯನ್ನು ನಮ್ಮ ಹೊಸ ಸಹೋದ್ಯೋಗಿ ಕುಮಾರ್ ಹಾಗೆ ಇದ್ದಕ್ಕಿದ್ದಂತೆ ನಮ್ಮತ್ತ ಬೀಸಿ ಸ್ತಂಭೀಭೂತಗೊಳಿಸುತ್ತಾರೆ ಎಂದು ನಾವಾರೂ ನಿರೀಕ್ಷಿಸಿರಲಿಲ್ಲ. ಹಾಗೇ, ಕನ್ನಡದ ಜನಪ್ರಿಯವೂ, ಜಗದ್ವಿಖ್ಯಾತವೂ ಆದ ಬ್ಲಾಗುಗಾರ್ತಿ ತೀರಾ ಇತ್ತೀಚಿನವರೆಗೆ ನಮ್ಮ ಸಹೋದ್ಯೋಗಿಯಾಗಿದ್ದರು ಎಂಬ ಸಂಗತಿ ಅರಿಯದವರು ಇರುತ್ತಾರಲ್ಲಾ ಎಂದು ಕೂಡಾ ಖೇದವಾಗದೇ ಇರಲಿಲ್ಲ. ಹೀಗಾಗಿ ಸದರಿ ವಿಷಯವನ್ನು ಅತೀವ ಹೆಮ್ಮೆಯಿಂದ ಪ್ರಸ್ತುತಪಡಿಸದೇ ಹೋದರೆ ಕರ್ತವ್ಯಲೋಪವಾದೀತೆಂಬ ಪ್ರಜ್ಞೆಯಿಂದ ಮಾತ್ರವಲ್ಲದೆ, ಈಗ ಯಾರ ಬಗ್ಗೆ ಬರೆಯುತ್ತಿದ್ದೇನೆಯೋ ಆಕೆಯ ವಿವಾಹ ಸಂದರ್ಭದಲ್ಲೇ, ಅಂದರೆ ಮೂರು ತಿಂಗಳ ಹಿಂದೆಯೇ ಬರೆಯಬೇಕಿದ್ದ ಮತ್ತು ನನ್ನ ದೈನಂದಿನ ಸೋಮಾರಿತನದಿಂದ ಮುಂದೂಡಲಾಗಿದ್ದ ಲೇಖನವನ್ನು ಈಗಲಾದರೂ ಬರೆಯುವ ಸಾಹಸಕ್ಕೆ ಮುಂದಾಗಿದ್ದೇನೆ ಎಂದು ಈ ಮೂಲಕ ಹೃತ್ಪೂರ್ವಕವಾಗಿ ತಿಳಿಯಪಡಿಸುತ್ತೇನೆ.
ಅದೇನೆಂದರೆ, ಭಾರತ ದೇಶಕ್ಕೆ ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ಬಂದ ವರ್ಷ ಅಂದರೆ ಸನ್ 2007ನೇ ವರ್ಷದ ಶ್ರಾವಣ ಮಾಸದ ಆಜುಬಾಜಿನಲ್ಲಿ ನನ್ನ ಮೊದಲ ಮತ್ತು ಏಕೈಕ ಬ್ಲಾಗನ್ನು ಆರಂಭಿಸಿದ್ದೆನಷ್ಟೆ. 'ದೊಡ್ಡವರು ಚಿಕ್ಕವರು ಭೇದವಿಲ್ಲದೆ ಎಲ್ಲಾ ಹುಲುಮಾನವರನ್ನೂ ಅಂತರ್ಜಾಲವೆಂಬ ಮಾಯಾಂಗಿನಿ ಆವರಿಸುತ್ತಿರುವ ಪ್ರಸಕ್ತ ಕಾಲದಲ್ಲಿ ತಮ್ಮದೇ ಒಂದು ಖಾಸಾ ಬ್ಲಾಗನ್ನು ತೆರೆಯದೇ ಹೋದವರು ಮುಲಾಜಿಲ್ಲದೆ ಔಟ್ ಡೇಟೆಡ್ ಆಗುತ್ತಾರೆಂದೂ, ಅದರಲ್ಲೂ ಮೀಡಿಯಾ ಲೋಕದವರಾಗಿಯೂ ಬ್ಲಾಗ್ ಹೊಂದದೇ ಹೋದರೆ ಕೆಲಸಕ್ಕೆ ಬಾರದವರಾಗುತ್ತಾರೆ' ಎಂದೂ ಟಿವಿ9 ಶಿವಪ್ರಸಾದ ಪದೇ ಪದೇ ಬೆದರಿಕೆ ಒಡ್ಡದೇ ಹೋಗಿದ್ದಲ್ಲಿ ನವಿಲುಗರಿ ಗರಿಬಿಚ್ಚುತ್ತಿರಲಿಲ್ಲ ಎಂಬುದು ಐತಿಹಾಸಿಕ ಸತ್ಯ. ಕಷ್ಟಪಟ್ಟು ಬ್ಲಾಗು ಆರಂಭಿಸಿದ್ದೇನೋ ಆಯಿತು. ಅಷ್ಟೇ ಮುಚ್ಚಟೆಯಿಂದ ಒಂದೆರಡು ಬರಹಗಳನ್ನು ಪೋಸ್ಟು ಮಾಡಿದ್ದೂ ಆಯಿತು. 'ಬರಿದೆ ಬರೆದೇನು ಫಲ, ಕೇಳುವ ಸೂರಿಗಳಿಲ್ಲದೆ' ಎಂಬಂತೆ ಬ್ಲಾಗು ಆರಂಭಿಸಿದರೆ ಸಾಲದು ಕಾಮೆಂಟುಗಳ ಒರತೆ ಇರಬೇಕು ಎಂದು ಕೆಲ ಮಿತ್ರರು ಪದೇ ಪದೇ ಛೇಡಿಸತೊಡಗಿದರು. ಹೀಗಾಗಿ ಕಂಡ ಕಂಡ ನೆಟ್ಟಿಗರನ್ನೆಲ್ಲಾ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾಮೆಂಟು ಮಾಡುವಂತೆ ವಿನಂತಿಸಿಕೊಳ್ಳಲು ತೊಡಗಿದರೂ ಹೇಳಿಕೊಳ್ಳುವಂಥ ಬೆಳವಣಿಗೆ ಆಗಲಿಲ್ಲ. ಇದಕ್ಕೆ 'ನಾನು ವಿವಾದಾತ್ಮಕ ಖಾಸಾ ಸಂಗತಿಗಳನ್ನು ಬರೆಯದೇ ಇರುತ್ತಿದ್ದುದು ಒಂದು ಕಾರಣವಾಗಿದ್ದರೆ, ಪುರುಷನಾಗಿದ್ದುದು ಮತ್ತೊಂದು ಕಾರಣ' ಎಂದು ಕೆಲವು ಹಿತೈಷಿಗಳು ನನಗೆ ಸಮಾಧಾನ ಮಾಡಲು ಯತ್ನಿಸಿದ್ದುದೂ ಉಂಟು. ಇದೇ ಸಂದರ್ಭದಲ್ಲೇ ಶರಧಿ ಎಂಬ ಬ್ಲಾಗುಗಾರ್ತಿಯ ಚೆಂದದ ಬರಹಗಳ ಬಗ್ಗೆಯೂ, ಆ ಬರಹಗಳಿಗೆ ಸುನಾಮಿಗಿಂತಲೂ ವೇಗವಾಗಿ ಅಪ್ಪಳಿಸುವ ಅಸಂಖ್ಯಾತ ಕಾಮೆಂಟುಗಳ ಬಗ್ಗೆಯೂ, ಎಣಿಸಲು ಹೊರಟರೆ ಚೀನಾ ಜನಸಂಖ್ಯೆಯನ್ನೂ ಮೀರಿಸುವ ಆ ಬ್ಲಾಗಿನ ಫಾಲೋಯರ್ ಗಳ ಬಗ್ಗೆಯೂ ನನಗೆ ಮಾಹಿತಿ ಬಂದದ್ದು. ಈ ಶರಧಿ ಎಂಬ ಬ್ಲಾಗುಗಾರ್ತಿ ಬೇರಾರೂ ಆಗಿರದೇ ಬೆಂಗಳೂರು ಕಚೇರಿಯ ನಮ್ಮ ಸಹೋದ್ಯೋಗಿ ಎಂಬ ಸತ್ಯಾಂಶ ತಿಳಿಯಲು ತಡವಾಗಲಿಲ್ಲ. ಹೀಗಾಗಿ, ಪೋಸ್ಟು ಮಾಡಿದ ಕ್ಷಣಾರ್ಧದಲ್ಲಿ ಅದನ್ನೇ ಕಾಯುತ್ತಿದ್ದವರಂತೆ 28 ಕಾಮೆಂಟುಗಳು ಅಪ್ಪಳಿಸುವಂತೆ ಬರೆಯುವ ಬ್ಲಾಗುತಂತ್ರಗಳನ್ನು ಆಕೆಯಿಂದ ಕೇಳಿಕೊಂಡಿದ್ದೂ ತಡವಾಗಲಿಲ್ಲ. ಮತ್ತು ಬಿಡುವಾದಾಗ ನನ್ನ ಬ್ಲಾಗಿಗೂ ಕೆಲವು ಕಾಮೆಂಟುಗಳನ್ನು ಹಾಕುವಂತೆಯೂ, ತಮ್ಮ ಬ್ಲಾಗುರೋಲ್ ಪಟ್ಟಿಯಲ್ಲಿ ನನ್ನ ಬ್ಲಾಗನ್ನೂ ಸೇರಿಸಿಕೊಳ್ಳುವಂತೆಯೂ ವಿನಂತಿಸಿದ್ದು ಕೂಡಾ ತಡವಾಗಲಿಲ್ಲ. ಈ ಎಲ್ಲಾ ಕಾರ್ಯಾಚರಣೆಯ ಫಲವಾಗಿ ನನ್ನ ಬ್ಲಾಗಿಗೂ ಕೆಲವು ಕಾಮೆಂಟುಗಳು ಹರಿದುಬರತೊಡಗಿದ್ದೇ ಅಲ್ಲದೆ, ಶರಧಿಯಂಥ ಶರಧಿಯು ನನ್ನ ಪೋಸ್ಟುಗಳ ಪರ್ಮನೆಂಟ್ ಕಾಮೆಂಟುಗಾರ್ತಿಯಾದಳು.
ಒಂದು ಆಂಗಲ್ ನಿಂದ ನೋಡಿದರೆ ಒನಕೆ ಓಬವ್ವಳಂತೆಯೂ ಮತ್ತೊಂದು ಆಂಗಲ್ ನಿಂದ ನೋಡಿದರೆ ಝಾನ್ಸಿರಾಣಿ ಲಕ್ಷ್ಮಿಬಾಯಿಯಂತೆಯೂ ಕಂಗೊಳಿಸುತ್ತಿದ್ದ ಶರಧಿ ತನ್ನ ಬರವಣಿಗೆ ಮಾತ್ರವಲ್ಲದೆ, ಏಕಕಾಲದಲ್ಲಿ ಮುಗ್ಧತೆ ಮತ್ತು ವೀರಾವೇಶತನಕ್ಕೆ ಕಚೇರಿಯಾದ್ಯಂತ ಹೆಸರುವಾಸಿಯಾಗಿದ್ದಳಷ್ಟೆ. ಇಂಥ ಶರಧಿಯನ್ನು ತಿಳಿದೋ ತಿಳಿಯದೆಯೋ ಕೆಣಕಲು ಹೋಗಿ ಭೌತಿಕವಾಗಿ, ಮಾನಸಿಕವಾಗಿ ಒದೆ ತಿಂದವರ ಸಂಖ್ಯೆ ಕಡಿಮೆ ಏನೂ ಇರಲಿಲ್ಲ. ಕರಾವಳಿ ವಿಚಾರ ತೆಗೆದು ನಾನು ಕೂಡಾ ಆಗಾಗ ಆಕೆಯನ್ನು ತಮಾಷೆಗೆಂಬಂತೆ ಕೆರಳಿಸಿ ಕೋಪಾಟೋಪ ರುದ್ರಪ್ರತಾಪದ ದರ್ಶನ ಮಾಡುತ್ತಿದ್ದುದುಂಟು. ಸುದೈವವಶಾತ್ ಅವೆಲ್ಲವೂ ಮಾತಿನ ಚಕಮಕಿಯಲ್ಲೇ ಪರ್ಯಾವಸಾನಗೊಂಡು, ಹಲ್ಲೆ, ಪ್ರಹಾರ ಮುಂತಾದವುಗಳಿಗೆ ನಾನು ಈಡಾಗಲಿಲ್ಲ ಎಂಬುದನ್ನು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತೇನೆ.
ಹೀಗಿರುವಾಗಲೇ, ಒಮ್ಮೆ ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಅವರ ಸಂದರ್ಶನಕ್ಕೆ ನಾವು ತೆರಳಿದ್ದ ಸಂದರ್ಭದಲ್ಲಿ, ಕ್ಯಾಮರಾ ಆಪರೇಟ್ ವಿಧಾನವನ್ನು ಆಕೆಗೆ ಹೇಳಿಕೊಟ್ಟ ಮೇಲೆ ಕೂಡಾ ಸಚಿವರ ಫೋಟೋವನ್ನಾಗಲೀ, ಕನಿಷ್ಠ ಪಕ್ಷ ನನ್ನ ಫೋಟೋವನ್ನಾಗಲೀ ತೆಗೆಯದೆ ಟೇಬಲ್ ಮೇಲಿದ್ದ ನನ್ನ ಹೆಲ್ಮೆಟ್ ಫೋಟೋ ತೆಗೆದಿದ್ದು ಕೂಡಾ ಆಕೆಯ ಇಂಥ ಒಂದು ಕೋಪಾಟೋಪದ ಕಾರಣವೋ, ಅಮಾಯಕತೆಯೋ ಇಂದಿಗೂ ಅರ್ಥವಾಗಿಲ್ಲ. ಆದರೂ ಕಾಲ ಕಳೆದಂತೆ ಬೆಂಗಳೂರಿನ ಪ್ರತಿಷ್ಠಿತ ಏರಿಯಾವೊಂದರಲ್ಲಿ ಕಣ್ಣು ಮುಚ್ಚಿ ಬಿಡುವುದರೊಳಗಾಗಿ ಆ ನನ್ನ ಹೆಲ್ಮೆಟ್ ಕಾಣೆಯಾಗಿ ಹೋಗಿ, ಈಗ ಅದರ ಜ್ಞಾಪಕಾರ್ಥ ನನ್ನ ಬಳಿ ಇರುವುದು ಶರಧಿ ತೆಗೆದ ಆ ಫೊಟೋ ಮಾತ್ರ ಎಂಬುದು ನೆನಪಾದಾಗ ಭಲೆ ಎನಿಸುವುದೂ ಉಂಟು.
ಇರಲಿ, ಮುಖ್ಯ ವಿಚಾರಕ್ಕೆ ಬರೋಣ. ಶರಧಿಯ ವೀರಾವೇಶ ಉತ್ತುಂಗದಲ್ಲಿದ್ದ ಕಾಲದಲ್ಲೇ ಕಚೇರಿಗೆ ನಮ್ಮ ಸಾಗರದ ಕಡೆಯ ಅಮಾಯಕ ಆಕೃತಿಯೊಂದು ಪ್ರವೇಶವಾಯಿತಷ್ಟೆ. ಎಲ್ಲಾ ಸಾಗರದವರಂತೆ ತಾನು ಕೂಡಾ ಬುದ್ಧಿಜೀವಿಯಾಗಬೇಕೆಂಬ ಹಂಬಲವಿದ್ದ ಆತ ತಕ್ಕಮಟ್ಟಿಗೆ ಸಾಹಿತ್ಯಪ್ರಿಯನೂ, ಸಮಯಾಸಮಯದಲ್ಲಿ ನಿರುಪದ್ರವಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮನೂ, ಮೇಲಾಗಿ ಅಪ್ರತಿಮ ಜಿಪುಣಾಗ್ರೇಸರನೂ ಆಗಿದ್ದನು (ಈತನ ರೋಚಕವೂ, ಹಸನಪ್ರಚೋದಕವೂ ಆದ Red Bull ಕಥೆಯನ್ನು ಮತ್ತೊಮ್ಮೆ ಬೇಕಾದರೆ ಹೇಳುತ್ತೇನೆ). ಕನ್ನಡ ಮತ್ತು ಇಂಗ್ಲಿಷ್ ಉಭಯ ಭಾಷೆಗಳಲ್ಲೂ ಒಳ್ಳೆಯ ಬರವಣಿಗೆ ರೂಢಿಸಿಕೊಂಡಿದ್ದ ಆತ ಎಂದಾದರೊಮ್ಮೆ ಟ್ರಿಮ್ ಮಾಡಿದ ಗಡ್ಡ ಬಿಟ್ಟು ಅದರೊಳಗೆ ಬೆರಳು ತುರಿಸುತ್ತಾ ಥೇಟು ಅನಂತಮೂರ್ತಿಗಳ ಹಾಗೆ ಬೌದ್ಧಿಕ ನಗೆ ಒಗೆಯುತ್ತಿರಬೇಕು ಎಂಬ ಮಹತ್ವಾಕಾಂಕ್ಷೆಯನ್ನೂ ಹೊಂದಿದ್ದುದು ರಹಸ್ಯವಾಗೇನೂ ಇರಲಿಲ್ಲ. ಆದರೆ ವಿಧಿವಿಲಾಸದ ಜಾಡನ್ನರಿವರಾರ್? ಎಲ್ಲರಿಗೂ ಕೆಟ್ಟಕಾಲ ಒಂದಿರುತ್ತದೆ ಎಂಬುದು ಬರಿ ಕಲ್ಪನೆಯ ಮಾತಲ್ಲವಲ್ಲ... ಹಾಗೆ, ಒಮ್ಮೆ ತನ್ನ ಗಡ್ಡವಿಲ್ಲದ ಕೆನ್ನೆಯ ಮೇಲೆ ಬೆರಳು ತುರಿಸುತ್ತಿದ್ದ ಆತ ಸುಮ್ಮನಿರಲಾರದೆ, ಎದುರಿಗೆ ಲೀಲಾಜಾಲವಾಗಿ ಬರುತ್ತಿದ್ದ ಶರಧಿ ಮತ್ತು ನಮ್ಮ ಕಚೇರಿಯ ತೆಳುಹುಡುಗಿಯೊಬ್ಬಳನ್ನು ನೋಡಿ, '200 ಗ್ರಾಂ ಟೂಥ್ ಪೇಸ್ಟ್ ಕೊಂಡರೆ 25 ಗ್ರಾಂ ಫ್ರೀ ಅನ್ನೋ ಜಾಹಿರಾತು ನೆನಪಾಗುತ್ತದೆ' ಎಂದು ಪ್ಯಾಲಿ ನಗೆ ಸಹಿತ ಡಯಲಾಗು ಬಿಟ್ಟನಷ್ಟೆ. ಒರಟಾಗಿ ಬೀಸಿದರೆ ಗಾಳಿಯ ಮೇಲೇ ಯುದ್ಧ ಸಾರುವ ಸ್ವಭಾವದ ಶರಧಿ ತನ್ನ ಆಕೃತಿಯ ಬಗ್ಗೆ ಆಫ್ಟರ್ ಆಲ್ ಒಬ್ಬ ಅಮಾಯಕ ಹುಲುಮಾನವ ಹೀಗೆ ಲಘುವಾಗಿ ಮಾತನಾಡಿ ಸಮರ ಸಾರಿದ ಮೇಲೆ ಸುಮ್ಮನಿದ್ದಳಾದರೂ ಹೇಗೆ. ನಿಮಿಷಾರ್ಧದಲ್ಲಿ ನಖಶಿಖಾಂತ ಕೆರಳಿದ ಆಕೆ ಆತನಿಗೆ ಯಾವ ಪರಿ ಪ್ರಹಾರ ಮಾಡತೊಡಗಿದಳೆಂದರೆ, ಆ ಕ್ಷಣ ಚೀತ್ಕರಿಸಲು ಆರಂಭಿಸಿದ ಆತ ಸಮಾಧಾನದ ನಿಟ್ಟುಸಿರುಬಿಟ್ಟಿದ್ದು ವರ್ಷಕಾಲದ ನಂತರ ಶರಧಿ ಬೇರೊಂದು ಕಚೇರಿ ಸೇರಿದ ಸುದ್ದಿ ಕೇಳಿದಾಗಲಷ್ಟೇ.
ಇಂಥ ಶರಧಿ ಅಮ್ಮನ ಬಗ್ಗೆಯಾಗಲಿ, ತಮ್ಮನ ಬಗ್ಗೆಯಾಗಲಿ, ತಾನು ಹುಟ್ಟಿ ಬೆಳೆದ ಹಳ್ಳಿಗಾಡಿನ ಬಗ್ಗೆಯಾಗಲಿ ಅಷ್ಟೇ ಆಪ್ತವಾಗಿ, ಮನಕ್ಕೆ ನಾಟುವಂತೆ ಬರೆಯುವುದನ್ನು ಕರಗತ ಮಾಡಿಕೊಂಡಿರುವುದು ಕಡಿಮೆ ಸಾಧನೆಯಲ್ಲ. ಭೂಲೋಕದ ಸಕಲ ಚರಾಚರ ವಸ್ತುಗಳು ಆಕೆಯ ಬ್ಲಾಗಿನಲ್ಲಿ ಅಕ್ಷರ ರೂಪವಾಗಿ ಒಡಮೂಡಲು ಕಾಯುತ್ತಿರುವುದು ಅತಿಶಯೋಕ್ತಿಯೂ ಅಲ್ಲ. ಆಕೆಯ ಬ್ಲಾಗಿನ ಅಭಿಮಾನಿಕೋಟಿಗಳಲ್ಲೊಬ್ಬರೂ, ಸ್ವತಃ ಒಳ್ಳೆಯ ಬರಹಗಾರರೂ ಆದ ಸಂತೋಷ್ ಎಂಬ ಸಜ್ಜನ ವ್ಯಕ್ತಿಯೊಬ್ಬರು, ಬ್ಲಾಗಿನ ಮೂಲಕವೇ ಪರಿಚಯ ಮಾಡಿಕೊಂಡು ಕಾಲಕ್ರಮೇಣ ಆಕೆಯ ಕೈ ಹಿಡಿಯುವಲ್ಲಿ ಯಶಸ್ವಿಯಾದರು. ಸದಾಶಿವನಗರದಲ್ಲಿ ನಡೆದ ಅವರ ಶುಭವಿವಾಹ ಸಮಾರಂಭಕ್ಕೆ ಪರಿವಾರ ಸಮೇತರಾಗಿ ನಾವೆಲ್ಲಾ ಹೋಗಿದ್ದುದುಂಟು. ಶುಚಿರುಚಿಯಾದ ಭೋಜನ ಸೇವಿಸುತ್ತಿದ್ದಾಗ ಸಾಗರದ ಸಾಹಿತ್ಯಪ್ರಿಯ ತಾನು ತಿಂದ ಹೊಡೆತಗಳ ನೆನಪನ್ನು ಪ್ಯಾಲಿ ನಗೆ ಸೂಸುತ್ತಾ ಹೊರಹಾಕಿದ್ದುದೂ ಉಂಟು. ಆಗಲೇ ಇಂಥದೊಂದು ಲೇಖನ ಬರೆಯಬೇಕೆಂದು ನಾನು ಧೈರ್ಯ ಮಾಡಿದ್ದು. ನಂತರದಲ್ಲಿ ಚಾಟಿನಲ್ಲೋ, ಫೋನಿನಲ್ಲೋ ಆಗಾಗ್ಗೆ ಸಿಕ್ಕಾಗ, 'ನಾನು ಆ ಕಚೇರಿ ಬಿಟ್ಟೆ ಎಂತ ಅನಿಸೋದೇ ಇಲ್ಲ ಸರ್, ನಿಮ್ಮೆಲ್ಲರ ಜೊತೆ ಈಗಲೂ ಇದ್ದೇನೆ ಎಂತಲೇ ಅನ್ನಿಸುತ್ತೆ' ಎಂದು ಶರಧಿ ಆಪ್ತವಾಗಿ ಬೆದರಿಕೆ ಹಾಕುವುದುಂಟು!
ಉಪಸಂಹಾರ: ಪ್ರಸ್ತುತ ತೆಳುಹುಡುಗಿಯನ್ನು ಈಗ 40 ಗ್ರಾಂ ಎನ್ನಲಡ್ಡಿಯಿಲ್ಲ. ಕುಮಾರ್ ಈಗ ಶರಧಿ ಬ್ಲಾಗಿನ ಹೊಸ ಅಭಿಮಾನಿ. ಶುಭವಿವಾಹದ ನಂತರ ಶರಧಿಗೆ ಬರುವ ಕಾಮೆಂಟುಗಳ ಸಂಖ್ಯೆಯಲ್ಲಿ ಇಳಿಮುಖ ಆಗಿದೆಯಂತೆ. ಕೊನೆಯದಾಗಿ, ಈ ಪೋಸ್ಟ್ ನ್ನು ನೋಡಿದ, ಓದಿದ, ಓದಿಸಿ ಕೇಳಿದ, ಕಾಮೆಂಟು ಹಾಕಿದ ಬ್ಲಾಗುಪ್ರಿಯರ ಸಿಸ್ಟಮ್ ಗಳು ವೈರಸ್ ಬಾಧೆಯಿಂದ ಮುಕ್ತವಾಗುತ್ತವೆ; ಮಹಿಳಾ ಲೇಖಕಿಯರ ಪರಿಚಯ ಯೋಗ ಶೀಘ್ರ ಒದಗುವುದೂ ಸೇರಿದಂತೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬಲ್ಲಿಗೆ ಜಯ ಮಂಗಳಂ ನಿತ್ಯ ಶುಭಮಂಗಳಂ!

Friday, 3 April 2009

ಬಿಡುವೇ ಗೊತ್ತಿಲ್ಲದ ಆ ದೈತ್ಯನ ಹೆಸರು ಟಿಆರ್ ಶಿವಪ್ರಸಾದ್

ದಾವಣಗೆರೆ ದಿನಗಳಲ್ಲಿ ಕಚೇರಿಗೆ ಹೋದ ಕೂಡಲೇ ಎಲ್ಲಾ ದಿನಪತ್ರಿಕೆಗಳನ್ನೂ ಮುಂದೆ ಹರಡಿಕೊಂಡು ಒಂದೊಂದನ್ನೇ ವಿಶ್ಲೇಷಿಸುವುದು ನನಗೆ ಅತ್ಯಂತ ಆಪ್ಯಾಯಮಾನವಾದ ಸಂಗತಿಯಾಗಿತ್ತು.
ನನ್ನ ಸಹೋದ್ಯೋಗಿಗಳಾಗಿದ್ದ ಸಚ್ಚಿದಾನಂದ ಮತ್ತು ಡೆಕ್ಕನ್ ಹೆರಾಲ್ಡ್ ನ ಗಿರೀಶ್ ಕೆರೋಡಿ ಅವರೂ ಈ ಕಾರ್ಯದಲ್ಲಿ ಸೇರಿಕೊಳ್ಳುತ್ತಿದ್ದರು. ಒಂದು ದಿನ ವಿಜಯ ಕರ್ನಾಟಕ ಪತ್ರಿಕೆಯನ್ನು ನೋಡಿದ ಕೂಡಲೇ ನಾನು "ಇದೇನಿದು ಆಶ್ಚರ್ಯ, ಇವತ್ತು ಟಿ.ಆರ್. ಶಿವಪ್ರಸಾದನ ಯಾವುದೇ ವಿಶೇಷ ವರದಿ ಬಂದಿಲ್ಲವಲ್ಲಾ?" ಅಂತ ಉದ್ಗಾರ ತೆಗೆದೆ. ಆ ದಿನಗಳಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಶಿವಪ್ರಸಾದನ ಒಂದಾದರೂ ಲೇಖನ ಪ್ರಕಟಗೊಳ್ಳುವುದು ಕಾಯಂ ಆಗಿತ್ತು. ಆತನ ವಿಶೇಷ ವರದಿ ಪ್ರಕಟಗೊಳ್ಳದ ದಿನ ಅಪರೂಪ ಎಂಬಂತಿತ್ತು. ನಾವು ಯಾವುದಾದರೊಂದು ಸ್ಕೂಪ್ ಬಗ್ಗೆ ಚರ್ಚಿಸಿ ಅದನ್ನು ನಾಳೆ ಮಾಡಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ನಾಳಿನ ವಿಕೆಯಲ್ಲಿ ಅದು ಶಿವಪ್ರಸಾದ್ ಬೈಲೈನ್ ನಲ್ಲಿ ಪ್ರಕಟಗೊಂಡು ಬಿಟ್ಟಿರುತ್ತಿತ್ತು. ಸದಾ ಓಡಾಡುತ್ಥಾ ಏನಾದರೊಂದು ಮಾಡುತ್ತಲೇ ಇದ್ದ ಆತ ಆಕಾರದಲ್ಲಿ ವಾಮನನಾದರೂ ನಮಗೆಲ್ಲಾ ದೈತ್ಯನಂತೆ ಕಾಣುತ್ತಿದ್ದ.
ನಾನು ಮೊದಲು ಆತನನ್ನು ನೋಡಿದ್ದು ಬೆಂಗಳೂರಿನ ಭಾರತೀಯ ವಿದ್ಯಾ ಭವನದ ನಮ್ಮ ಜರ್ನಲಿಸಂ ತರಗತಿಯಲ್ಲಿ. ನಾನು ಕನ್ನಡ ಮೀಡಿಯಂ, ಆತ ಇಂಗ್ಲಿಷ್ ಮೀಡಿಯಂ. ಆದರೂ ಕನ್ನಡ ಮೀಡಿಯಂ ತರಗತಿಗಳಲ್ಲೇ ಒಳ್ಳೆ ಫ್ಯಾಕಲ್ಟಿ ಇದ್ದಾರೆ ಅಂತ ಆತನ ತರಗತಿ ಮುಗಿಸಿಕೊಂಡು ನಮ್ಮ ತರಗತಿಗೂ ಅಟೆಂಡ್ ಆಗುತ್ತಿದ್ದ. ಕಾಲೇಜು ಹುಡುಗರು ಒಂದು ಕ್ರಿಕೆಟ್ ಟೂರ್ನಿ ಮಾಡಬೇಕು ಎಂದುಕೊಳ್ಳಲಿ, ಒಂದು ಕಲ್ಚರಲ್ ಕಾರ್ಯಕ್ರಮ ಕೊಡಬೇಕು ಎಂದುಕೊಳ್ಳಲಿ ಎಲ್ಲವನ್ನೂ ಮುಂದೆ ನಿಂತು ಅದ್ಭುತವಾಗಿ ಸಂಘಟಿಸುತ್ತಿದ್ದ. ಕಾಲೇಜು ದಿನಗಳಲ್ಲೇ ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ನನ್ನ ನುಡಿಚಿತ್ರವೊಂದು ಮುಖಪುಟದಲ್ಲೇ ಪ್ರಕಟಗೊಂಡಿದ್ದನ್ನು ಮುಂಜಾನೆ ತರಗತಿಗೆ ಬಂದಕೂಡಲೇ ಮೊದಲು ನನ್ನ ಗಮನಕ್ಕೆ ತಂದವನು ಆತನೇ. ಕಾಲೇಜು ದಿನಗಳು ಮುಗಿದವು. ನಾನು ಬೆಂಗಳೂರಿನ ಸಮಸ್ತ ಪತ್ರಿಕಾ ಕಚೇರಿಗಳಿಗೆ ಕೆಲಸಕ್ಕಾಗಿ ಅಲೆದಾಡುತ್ತಾ, ಫ್ರೀಲ್ಯಾನ್ಸ್ ಆಗಿ ಬರೆಯುತ್ತಾ ಉಳಿದುಬಿಟ್ಟೆ. ಅವನು ಈ ಟಿವಿಯ ಎಂಟರ್ ಟೇನ್ ಮೆಂಟ್ ಸೆಕ್ಷನ್ ನಲ್ಲಿ ಕೆಲಸ ಗಿಟ್ಟಿಸಿ ಹೈದರಾಬಾದಿಗೆ ಜಿಗಿದ. ಆನಂತರ ವಿಜಯ ಕರ್ನಾಟಕದ ಬಿಜಾಪುರ-ಬಾಗಲಕೋಟೆ ಕರೆಸ್ಪಾಂಡೆಂಟ್ ಆಗಿ ಒಂದಷ್ಟು ವರ್ಷ ಇದ್ದು ನಂತರ ದಾವಣಗೆರೆಗೆ ಬಂದ. ಅದೇ ವೇಳೆ ನಾನೂ ಕೂಡಾ ಪ್ರಜಾವಾಣಿಗೆ ಸೇರಿ ದಾವಣಗೆರೆಗೆ ಬಂದೆ. ಆನಂತರ ವಿಜಯ ಕರ್ನಾಟಕದಲ್ಲಿ ಪ್ರಕಟಗೊಳ್ಳುತ್ತಿದ್ದ ಆತನ ಬೈಲೈನ್ ವರದಿಗಳನ್ನು ಓದುತ್ತ ಓದುತ್ತಲೇ ದಾವಣಗೆರೆಯಲ್ಲಿ ಮೂರೂವರೆ ವರ್ಷಗಳನ್ನು ಕಳೆದುಬಿಟ್ಟೆ. ಈ ಮಧ್ಯೆ ಆತ ವಿಜಯ ಟೈಮ್ಸ್ ಸೇರಿ ಅಲ್ಲೂ ಬರೆಯತೊಡಗಿದ. ನಾನು ಪಿವಿ ಬಿಟ್ಟು 'ಸಂಡೆ ಇಂಡಿಯನ್' ಸೇರಿ ದಿಲ್ಲಿಗೆ ಹಾರಿದೆ. ಆತ ಕೂಡಾ ವಿಕೆ ಬಿಟ್ಟು ಟಿವಿ-9 ಸೇರಿ ದಿಲ್ಲಿಗೆ ಬಂದ. ಕಾಲೇಜು ದಿನಗಳಲ್ಲಿ ಬೆಂಗಳೂರಿನ ವಿಧಾನಸೌಧ, ಎಂಜಿ ರಸ್ತೆ ಸುತ್ತ-ಮುತ್ತ ಅಲೆದಾಡುತ್ತಿದ್ದ ಹಾಗೇ ದಿಲ್ಲಿಯ ಸರೋಜಿನಿ ಮಾರ್ಕೆಟ್, ಪಾರ್ಲಿಮೆಂಟ್ ಭವನದ ಸುತ್ತ-ಮುತ್ತಲೂ ಅಲೆದಾಡತೊಡಗಿದೆವು. 26/11ನ ಮುಂಬೈ ದಾಳಿಯನ್ನು ಆತ ವರದಿ ಮಾಡಿದ ರೀತಿ ಕರ್ನಾಟಕದಲ್ಲೇ ಲೋಕವಿಖ್ಯಾತವಾಯಿತು.
ಪತ್ರಿಕೋದ್ಯಮದ ಕುದುರೆ ಸವಾರಿಯಲ್ಲಿ ಸಿಲುಕಿರುವ ನಾವು ಸದಾ ಟೈಮಿಲ್ಲಾ ಎಂದು ಒದ್ದಾಡುತ್ತಿದ್ದರೆ ಆತ ಮಾತ್ರ ತನ್ನೆಲ್ಲಾ ವರದಿಗಾರಿಕೆಯ ಮಧ್ಯೆಯೇ ಪುಸ್ತಕ, ಬ್ಲಾಗುಗಳನ್ನೂ ನಿಯಮಿತವಾಗಿ ಬರೆಯುವುದನ್ನು ರೂಢಿಸಿಕೊಂಡ. ಈಗಾಗಲೇ ಮೂರು ಬ್ಲಾಗುಗಳನ್ನು ಹೊಂದಿರುವ ಆತ ಆ ನಿಟ್ಟಿನಲ್ಲಿ 'ತ್ರಿವಿಧ ಬ್ಲಾಗೋಹಿ'! ಇದೆಲ್ಲದರ ಮಧ್ಯೆ ಚಲನಚಿತ್ರದಲ್ಲೂ ಆತನ ಅಭಿರುಚಿ ಅಸದೃಶವಾದುದೇ. ಯಾವುದೇ ಒಳ್ಳೆಯ ಸಿನಿಮಾ ಬಂದರೂ ಅದನ್ನು ತಪ್ಪದೇ ನೋಡಿ ನಾವೂ ನೋಡುವಂತೆ ಪ್ರೇರೇಪಿಸುವುದನ್ನು ಆತ ಮರೆಯುವುದಿಲ್ಲ. ಆತನ 'ಸುಭಾಷ್ ಸಾವಿನ ಸುತ್ತಾ' ಮತ್ತು 'ಚಂದ್ರಯಾನ' ಪುಸ್ತಕಗಳು ಉತ್ತಮ ಮಾಹಿತಿ ಹೊತ್ತು ಸಕಾಲದಲ್ಲಿ ಮಾರುಕಟ್ಟೆಗೆ ಬಂದು ಹೆಸರು ಮಾಡಿದವು. 'ಚಂದ್ರಯಾನ' ಪುಸ್ತಕವನ್ನಂತೂ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ದಿಲ್ಲಿಯಲ್ಲಿ ಬಿಡುಗಡೆ ಮಾಡಿ ಬೆನ್ನುತಟ್ಟಿದರು. ನನ್ನ ಕೆಲಸಗಳ ಗಡಿಬಿಡಿಯಲ್ಲಿ ಆ ಪುಸ್ತಕಕ್ಕೊಂದು ಲೇಖನ ಬರೆದುಕೊಡಲೂ ನನಗೆ ಸಾಧ್ಯವಾಗಲಿಲ್ಲ. ಚಂದ್ರಯಾನದ ಬೆನ್ನಿಗೇ ಆತನ ಮತ್ತೊಂದು ಪುಸ್ತಕ ಈಗ ಬಿಡುಗಡೆಗೆ ಸಿದ್ಧವಾಗಿದೆ.
ಏಪ್ರಿಲ್ 13ರ ದಿನದ ಮಹತ್ವ ನಮ್ಮ ತಲೆಮಾರಿನವರಿಗೆ ಅರಿವಿಲ್ಲದಿರಬಹುದು. 1919ರ ಆ ದಿನ ಅಮೃತಸರದ ಜಲಿಯನ್ ವಾಲಾ ಬಾಗ್ ನಲ್ಲಿ ಸೇರಿದ್ದ ಅಮಾಯಕ ಭಾರತೀಯರ ಮೇಲೆ ಬ್ರಿಟಿಷ್ ಸರ್ಕಾರ ನಡೆಸಿದ ಬರ್ಬರ ದಾಳಿಯನ್ನು ಎಂದೂ ಮರೆಯುವಂತಿಲ್ಲ. 1500ಕ್ಕೂ ಹೆಚ್ಚು ಮಂದಿ ಗುಂಡಿಗೆ ಬಲಿಯಾದ ದುರ್ದಿನ ಅದು. ಘಟನೆ ನಡೆದು ಇದೀಗ 90 ವರ್ಷ. ಈ ಸಂಬಂಧ ಶಿವು ಬರೆದ ಟೈಮ್ಲಿ ಪುಸ್ತಕ 'ಜಲಿಯನ್ ವಾಲಾ ಬಾಗ್' ಬರುವ ಏಪ್ರಿಲ್ 13ರ ಸಂಜೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ...
ಬಿಡುವೇ ಗೊತ್ತಿಲ್ಲದ ಆ ದೈತ್ಯನ ಬಗ್ಗೆ ಅಚ್ಚರಿಗೊಳ್ಳುತ್ತಲೇ ಪುಸ್ತಕ ಎದುರು ನೋಡುತ್ತಿದ್ದೇನೆ.

Friday, 6 March 2009

ಗಾಂಧೀಜಿಯನ್ನು ನಾವು ಎಂದೋ ಹರಾಜು ಹಾಕಿಬಿಟ್ಟಿದ್ದೇವೆ!

ಮಹಾತ್ಮ ಗಾಂಧಿ ಬಳಸಿದ್ದೆಂದು ಹೇಳಲಾದ ಕೆಲ ವಸ್ತುಗಳ ಹರಾಜು ಪ್ರಕರಣ ಅದೇಕೆ ಅಷ್ಟು ಮಹತ್ವ, ಪ್ರಚಾರ ಪಡೆಯಿತೋ ತಿಳಿಯುತ್ತಿಲ್ಲ. ಮಹಾತ್ಮ ಗಾಂಧಿ ಅವರು ಬಳಸಿದ ಬಟ್ಟಲು, ಚಮಚ, ಗಡಿಯಾರ, ಕನ್ನಡಕ, ಚಪ್ಪಲಿ ಇತ್ಯಾದಿಗಳನ್ನು ಜೇಮ್ಸ್ ಓಟಿಸ್ ಎಂಬಾತ ನ್ಯೂಯಾರ್ಕ್ ನಲ್ಲಿ ಹರಾಜು ಹಾಕುವುದಾಗಿ ಹೇಳಿದ. ಆಗಲೇ ಆ ವಸ್ತುಗಳನ್ನು ಪಡೆದುಕೊಳ್ಳಲು ಭಾರತ ಸರ್ಕಾರ ಪ್ರಯತ್ನಿಸಬೇಕಾದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. (ಅಸಲಿಗೆ ಆ ವಸ್ತುಗಳು ಮಹಾತ್ಮ ಗಾಂಧಿಯದೋ, ಅಲ್ಲವೋ ಎಂಬುದೇ ನಿಶ್ಚಿತವಾಗಿಲ್ಲ. ಹಳೇ ಚಪ್ಪಲಿಯನ್ನು ಕಾಣಿಕೆ ನೀಡುವ ಸಂಪ್ರದಾಯ ನಮ್ಮದಲ್ಲ!).
ಅದಿರಲಿ. ಗಾಂಧೀಜಿ ತಮ್ಮ ಹಲವಾರು ಪ್ರೀತಿ ಪಾತ್ರರಿಗೆ ಅಂತಹ ಕೆಲವು ಕಾಣಿಕೆ ಕೊಡುತ್ತಿದ್ದುದು ನಿಜ. ಹಾಗೆ ಕಾಣಿಕೆ ಪಡೆದವರು ಮತ್ತವರ ವಂಶಜರಿಗೆ ಗಾಂಧಿ ಮೇಲೆ ಅಭಿಮಾನವಿದ್ದಲ್ಲಿ ಅವರು ಖಂಡಿತಾ ಹಣಕ್ಕಾಗಿ ಆ ವಸ್ತುಗಳನ್ನು ಹರಾಜು ಹಾಕಲಾರರು. ಹಾಗೆ ಹರಾಜು ಹಾಕಿದ್ದೇ ಆದಲ್ಲಿ, ಅಂಥವರ ಬಳಿ ಇದ್ದ ಆ ವಸ್ತುಗಳನ್ನು ನಾವು ಸಂಗ್ರಹಿಸಿಟ್ಟುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಆ ವಸ್ತುಗಳನ್ನು ಹರಾಜು ಹಾಕದೆ ಭಾರತಕ್ಕೆ ಹಿಂದಿರುಗಿಸಬೇಕು ಎಂಬ ಮನವಿಗೆ ಓಟಿಸ್ ಎಂಥಾ ಶರತ್ತು ಹಾಕಿದ ನೋಡಿ: 'ಭಾರತ ತನ್ನ ಬಜೆಟ್ ನಲ್ಲಿ ಬಡವರ ಯೋಗಕ್ಷೇಮಕ್ಕೆ ಹೆಚ್ಚು ಹಣ ಮೀಸಲಿಡಬೇಕು' ಎಂದ. ಇದು ಭಾರತಕ್ಕೆ ಇನ್ನಷ್ಟು ಮುಜಗರ ಉಂಟು ಮಾಡಿತು. ಬಡವರ ಬಗ್ಗೆ ಕಾಗದದ ಮೇಲೆ ಏನೆಲ್ಲಾ ಬೊಂಬಡಿ ಹೊಡೆದರೂ, ಭ್ರಷ್ಟ ಕಾರ್ಯಾಂಗ ಮಧ್ಯವರ್ತಿಗಳ ಲಾಬಿಯನ್ನು ಪೋಷಿಸುತ್ತಲೇ ಬಂದಿರುವ ನಮಗೆ ಇಂಥ ಮುಜಗರ ಆಗಬೇಕಾದ್ದೇ.
ಮಹಾತ್ಮನ ಸ್ಮಾರಕಗಳು ಯಾವುದೋ ದೇಶದಲ್ಲಿ ಹರಾಜಾಗುತ್ತಿದ್ದರೆ ಬೊಬ್ಬೆ ಹೊಡೆಯುವ ನಾವು ಆ ಮಹಾತ್ಮನನ್ನೇ ಯಾವಾಗಲೋ ಹರಾಜು ಹಾಕಿಬಿಟ್ಟಿದ್ದೇವೆ. ಕಂಡಕಂಡಲ್ಲಿ ಗಾಂಧಿ ಪ್ರತಿಮೆಗಳನ್ನು ನಿಲ್ಲಿಸುವುದು, ರಸ್ತೆ, ನಗರಗಳಿಗೆ ಗಾಂಧಿ ಹೆಸರಿಡುವುದೇ ಮಹಾತ್ಮನಿಗೆ ಸಲ್ಲಿಸುವ ಗೌರವ ಎಂಬ ಮೌಢ್ಯದಲ್ಲಿರುವ ನಮಗೆ ಗಾಂಧಿ ತತ್ವಗಳಾವುವೂ ನೆನಪಿಲ್ಲ. 'ಈಚೆಗೆ ಲಗೇ ರಹೋ ಮುನ್ನಾ ಭಾಯ್' ಎಂಬ ಕಮರ್ಷಿಯಲ್ ಸಿನಿಮಾದ ಸಂದರ್ಭ ಬಿಟ್ಟರೆ, ಆಧುನಿಕ ಭಾರತ ಗಾಂಧಿ ಬಗ್ಗೆ ಗಂಭೀರ ಚರ್ಚೆ ಮಾಡಿದ ಉದಾಹರಣೆಯೇ ಇಲ್ಲ.
ಹಾಗೆ ನೋಡಿದರೆ, ಈ ನೆಲದ ಮಹಾಮಹಿಮರ ನೆನಪು ಕೊಡುವ ವಸ್ತುಗಳು, ಸ್ಮಾರಕಗಳ ಬಗ್ಗೆ ನಿಜವಾಗಿ ನಮಗೆ ಆದರ ಇಲ್ಲವೇ ಇಲ್ಲ. ರವೀಂದ್ರನಾಥ ಠಾಕೂರರ ನೋಬೆಲ್ ಪದಕವನ್ನು ಮುತವರ್ಜಿಯಿಂದ ಕಾಪಾಡಿಕೊಳ್ಳಲೂ ನಮಗೆ ಸಾಧ್ಯವಾಗಲಿಲ್ಲ. ಮಹಾ ಮಹಿಮರ ಸ್ಮಾರಕಗಳನ್ನು ಧರ್ಮ, ಮತ-ಪಂಥಗಳ ಹೆಸರಿನಲ್ಲಿ ನಾವು ಹಾಳು ಮಾಡಿಬಿಡುತ್ತೇವೆ ಅಥವಾ ಕಣ್ಣ ಮುಂದೆ ಹಾಳಾಗುತ್ತಿದ್ದರೂ ಜಾಣಕುರುಡು ಪ್ರದರ್ಶಿಸಿಬಿಡುತ್ತೇವೆ. ಇಲ್ಲವೇ ಅಂಥವುಗಳನ್ನು 'ಕಮರ್ಷಿಯಲ್ ಸೆಂಟರ್'ಗಳಾಗಿ ಪರಿವರ್ತಿಸಿ ಜೀವನೋಪಾಯಕ್ಕೆ ಒಂದು ದಾರಿ ಮಾಡಿಕೊಂಡುಬಿಡುತ್ತೇವೆ.
ಗಾಂಧೀಜಿ ಮೇಲೆ ನಿಜಕ್ಕೂ ನಮಗೆ ಅಭಿಮಾನವಿದ್ದಲ್ಲಿ ನಾವು ಸತ್ಯ, ಸರಳತೆ, ಸಹೋದರತ್ವ, ಅಹಿಂಸೆಯಂತಹ ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳಬೇಕಲ್ಲವೇ? ಅದು ಬಿಟ್ಟು ನಿರ್ಜೀವ ವಸ್ತುಗಳನ್ನು ಸಂಗ್ರಹಿಸಿಕೊಳ್ಳುವ ಹುಚ್ಚು ಅಭಿಮಾನ ಏಕೆ?
ವಿಪರ್ಯಾಸ ಏನು ಗೊತ್ತೆ? 'ಮದ್ಯಪಾನ ಮಹಾ ಪಾಪ' ಎಂದ ಆ ಮಹಾತ್ಮನ ವಸ್ತುಗಳು ಕೊನೆಗೂ ನ್ಯೂಯಾರ್ಕ್ ನ ಹರಾಜು ಕಟ್ಟೆಯಿಂದ ಭಾರತಕ್ಕೆ ಬಂದಿದ್ದು ಲಿಕ್ಕರ್ ಹಣದಿಂದ!

Wednesday, 25 February 2009

ತಕ್ಕೋ ಎಲ್ ಬಿ ಪದಗಳ್ ಬಾಣ...

'ಪ್ರೊ. ಎಲ್ ಬಿ ಅವರ ಹಾಸ್ಯಮಯ ಮಾತುಗಳನ್ನು ಇನ್ನೊಮ್ಮೆ ಬರೆಯುತ್ತೀನಿ ಎಂದಿದ್ದೆಯಲ್ಲಾ ಬರೆದೆಯಾ?' ಎಂದು ನನ್ನ ಬಹಳಷ್ಟು ಮಿತ್ರರು ಕೇಳುತ್ತಲೇ ಇದ್ದಾರೆ. ಹೀಗಾಗಿ ಬಿಡುವು ಮಾಡಿಕೊಂಡು ಬರೆಯತೊಡಗಿದ್ದೇನೆ.
ಚಿತ್ರದುರ್ಗ ಸಾಹಿತ್ಯ ಸಮ್ಮೇಳನದಲ್ಲಿ ಮಠಾಧೀಶರನ್ನೂ, ರಾಜಕಾರಣಿಗಳನ್ನು ಝಾಡಿಸಿ ಅಭೂತಪೂರ್ವ ಭಾಷಣ ಮಾಡಿದ ಡಾ. ಎಲ್. ಬಸವರಾಜು ಅವರು ಸಮ್ಮೇಳನಾಧ್ಯಕ್ಷರ ಭಾಷಣಕ್ಕೇ ಹೊಸ ಗತ್ತು ನೀಡಿದರು. ಆ ಪರಿ ದೂಳು, ಅವ್ಯವಸ್ಥೆ ಏನೇ ಇರಲಿ, ಎಲ್ ಬಿ ಅವರ ಭಾಷಣದಿಂದಾಗಿ ಚಿತ್ರದುರ್ಗ ಸಮ್ಮೇಳನ ಗಮನಾರ್ಹವಾಗಿದ್ದು ಸತ್ಯ. ಹಾಗೆ ನೋಡಿದರೆ, ಮಠಾಧೀಶರು, ರಾಜಕಾರಣಿಗಳನ್ನು ಪ್ರೊ. ಎಲ್ ಬಿ ಅವರು ಝಾಡಿಸಿದ್ದು ತೀರಾ ಅನಿರೀಕ್ಷಿತವಾಗಿರಲಿಲ್ಲ. ಸಮ್ಮೇಳನಕ್ಕೆ ಎರಡು ವಾರ ಮುಂಚೆ ನಾನು ಮೈಸೂರಿನಲ್ಲಿ ಎಲ್ ಬಿ ಅವರನ್ನು ಭೇಟಿಯಾದಾಗಲೂ ಅವರು ಮಠಾಧೀಶರು, ರಾಜಕಾರಣಿಗಳ ವಿರುದ್ಧ ಕೆಂಡ ಕಾರಿದ್ದರು. ಜೊತೆಗೆ ಪೊಳ್ಳು ಮಾತಿನ ಸಾಹಿತಿಗಳನ್ನು ಹಿಗ್ಗಾ-ಮುಗ್ಗಾ ಹಣಿದಿದ್ದರು. 90 ವರ್ಷದ ಆ ಹಿರಿಯ ಜೀವ ಹೀಗೆ ರಾಜಕಾರಣಿಗಳು ಮತ್ತು ಮಠಾಧೀಶರ ವಿರುದ್ಧ ಆಡಿದ ಕಟು ಮಾತುಗಳು ಪ್ರಾಯಶಃ ಮೊದಲು ಪ್ರಕಟವಾಗಿದ್ದು ಸಂಡೇ ಇಂಡಿಯನ್ ನಲ್ಲೇ. (ವಿವರಕ್ಕೆ http://www.thesundayindian.com/kannada/20090208/tryst_basavaraju.asp ಕ್ಲಿಕ್ಕಿಸಿ) ವ್ಯವಸ್ಥೆಯ ವಿರುದ್ಧ ಆ ಪರಿ ಸಿಟ್ಟಿದ್ದ ಅವರೊಂದಿಗಿನ ಸಂದರ್ಶನ ಮಾತ್ರ ತುಂಬಾ ತಮಾಷೆಯಿಂದ ಕೂಡಿತ್ತು. ಅವರ ಚತುರ ಮಾತಿನ ಒಂದೆರಡು ಸ್ಯಾಂಪಲ್ ಇಲ್ಲಿ ನೀಡಿದ್ದೇನೆ:

ಸಂದರ್ಶನದ ಮಧ್ಯೆ ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತಾಡ್ತಾ, "ಅದರ ಬಗ್ಗೆ ಮುಂದಿನ ಪ್ರಶ್ನೆ ಕೇಳಬೇಡಿ" ಅಂದುಬಿಟ್ಟರು. 'ಯಾಕೆ ಸರ್?' ಅಂದೆ ಕುತೂಹಲದಿಂದ. " ಹಿಂದೆ ನಮ್ಮ ವಿಕ್ರಮ್ -ಬೇತಾಳ್ ಕತೆಯಲ್ಲಿ ಮುಂದಿನ ಪ್ರಶ್ನೆ ಕೇಳಿದೆಯಾದೊಡೆ ನಿನ್ನ ತಲೆ ಒಡೆದು ಸಾವಿರ ಹೋಳಾಗಲಿ ಅಂತಾನಲ್ಲ ಬೇತಾಳ. ಹಾಗೆ ಶಿಕ್ಷಣದ ಬಗ್ಗೆ ಪ್ರಶ್ನೆ ಮಾಡೋ ಹಾಗೇ ಇಲ್ಲ. ಅಂಥ ಪರಿಸ್ಥಿತಿ ಸೃಷ್ಟಿ ಮಾಡಿಬಿಟ್ಟಿದ್ದಾರೆ" ಎಂದರು.
ಹೀಗೇ ಮಾತನಾಡುತ್ತಾ, "ನಮ್ಮ ದೇಶದಲ್ಲಿ ಪ್ರತಿಯೊಂದು ಕೂಡಾ ನಕಲು. ಶಿಕ್ಷಣ, ಆಡಳಿತ, ಕೊನೆಗೆ ಸಾಹಿತ್ಯವನ್ನು ಕೂಡಾ ನಕಲು ಮಾಡೋದೇ?... ಒರಿಜಿನಲ್ ಅಂತ ಏನೂ ಬೇಡವೇ? ಏನ್ ಸುಮ್ನೆ ಕೇಳ್ತಾ ಕುಂತಿದ್ದೀರಲ್ಲಾ ನಾರಾಯಣ ಸ್ವಾಮಿ, ಈ ಪಾಯಿಂಟ್ ಹಾಕ್ಕೊಳಿ.." ಎಂದು ನಕ್ಕರು. ಅದು ಅವರ ಮಾತಿನ ಶೈಲಿ. (ಅದು ಆಗ್ಗೆ ಹಾಸ್ಯದಂತೆ ಕಂಡರೂ, ತಾವು ಹೇಳಿದ್ದನ್ನೆಲ್ಲಾ ಎಲ್ಲರಂತೆ ಬರೆದುಕೊಳ್ಳಿ ಅರ್ಥಾತ್ ನಕಲು ಮಾಡಿಕೊಳ್ಳಿ ಎಂಬ ವ್ಯಂಗ್ಯವೂ ಆ ಮಾತಿನಲ್ಲಿತ್ತು!)
ವರದಕ್ಷಿಣೆ ಪಿಡುಗಿನ ಬಗ್ಗೆ ಅಂತೂ ಕೆಂಡಕಾರಿದರು. "ಅಲ್ಲಾ ಜಾತಿಗೊಬ್ಬರು ಮಠಾಧೀಶರು, ಸ್ವಾಮೀಜಿಗಳು ಇದ್ದಾರಲ್ಲಾ, ಇವರೆಲ್ಲಾ ಆಯಾ ಸಮುದಾಯವರಲ್ಲಿ ವರದಕ್ಷಿಣೆ ತಗೋಳದನ್ನಾ ನಿಷೇಧ ಮಾಡೋಕೆ ಯಾಕೆ ಮುಂದಾಗಬಾರದು. ಜನ ಕಾನೂನು ಪಾಲನೆ ಮಾಡೊಲ್ಲ. ಆದರೆ ಸ್ವಾಮೀಜಿಗಳ ಮಾತು ಕೇಳ್ತಾರೆ..." ಬರ್ಕೊಳಿ ಈ ಪಾಯಿಂಟ್ ನ ಅಂತ ಕಣ್ಣು ಮಿಸುಕುತ್ತಲೇ ಹೇಳಿದರು.
ನಮ್ಮ ವ್ಯವಸ್ಥೆಯ ಬಗ್ಗೆ ಸಾಕಷ್ಟು ಟೀಕೆ ಮಾಡಿದ ಮೇಲೆ, ಮೆಲ್ಲಗೆ ಒಂದು ಪ್ರಶ್ನೆ ಕೇಳಿದರು: "ನಾರಾಯಣ ಸ್ವಾಮಿ, ನಮ್ಮ ದೇಶ, ಸಂಸ್ಕೃತಿ, ಇಲ್ಲಿನ ವ್ಯವಸ್ಥೆಯನ್ನೆಲ್ಲಾ ನಾನು ತುಂಬಾ ಬೈತಾ ಇದೀನಿ ಅಂತ ಅನ್ನಿಸ್ತಾ ಇದೆಯಾ?" ನಾನು 'ಛೇ ಛೇ' ಎಂದೆ. ಮತ್ತೆ ಅದೇ ಪ್ರಶ್ನೆ ಕೇಳಿ, "ನಿಮಗೆ ಹಾಗೆ ಅನಿಸಿದರೆ ನಾನು ವಿವೇಕಸ್ಥ ಅಂತ ಅರ್ಥ" ಎಂದು ನಕ್ಕರು.
ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳನ್ನು ಬಯ್ಯುತ್ತಾ, "ನಾನು ಈ ಮುಂಚೆ ಹೀಗೆ ಬಯ್ದಿದ್ದರೆ, 'ಓ ಇವನ್ನ ನಾವು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮಾಡಿಬಿಟ್ಟರೆ ಏನು ಗತಿ ಅಂತ, ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡ್ತಾನೇ ಇರಲಿಲ್ಲವೇನೋ. ಆದರೆ ಈಗ ಅಧ್ಯಕ್ಷನಾಗಿ ನನ್ನ ಹೆಸರು ಅನೌನ್ಸ್ ಮಾಡಿಬಿಟ್ಟಿದ್ದಾರೆ. ಹೀಗಾಗಿ ನಾನು ಧೈರ್ಯದಿಂದ ಟೀಕೆ ಮಾಡ್ಬಹುದು. ಏನಂತೀರಾ ನಾರಾಯಣಸ್ವಾಮಿ?" ಎಂದು ನಕ್ಕರು.
ನನಗೆ ಬೇಕಾದ ಪ್ರಶ್ನೆಗಳನ್ನೆಲ್ಲಾ ಕೇಳಿದ ಮೇಲೆ, ನಿಮ್ಮ ಸುದೀರ್ಘವಾದ ಅಧ್ಯಾಪನ ವೃತ್ತಿಯ ಸ್ವಾರಸ್ಯಕರ ಸಂಗತಿಯೊಂದನ್ನು ಹೇಳಿ ಎಂದೆ. "ಸ್ವಾರಸ್ಯಕರ ಸಂಗತಿಯೇ?, ದೇವರ ದಯೆಯಿಂದ ಯಾವ ವಿದ್ಯಾರ್ಥಿಯೂ ನನ್ನ ಮೇಲೆ ಹಲ್ಲೆ ನಡೆಸಲಿಲ್ಲ. ಅದೇ ಸ್ವಾರಸ್ಯ" ಎಂದು ನಕ್ಕರು. "ಆಗ ಅಧ್ಯಾಪಕರು ಅಂದ್ರೆ ಭಯ-ಭಕ್ತಿ ಇರೋ ವಿದ್ಯಾರ್ಥಿಗಳೂ ಇದ್ದರು. ಈಗಿನ ಹಾಗಲ್ಲ" ಎಂಬ ಮಾತೂ ಸೇರಿತು.
ಸಂದರ್ಶನದ ಕೊನೆಗೆ, "ನಿಮ್ಮ ಸಾಂಸಾರಿಕ ಜೀವನದ ಬಗ್ಗೆ ಹೇಳಿ" ಎಂದೆ. ಈ ಪ್ರಶ್ನೆ ಕೇಳಿದಾಗ ಎಲ್ ಬಿ ಅವರ ಶ್ರೀಮತಿಯವರೂ ಬಳಿಯಲ್ಲೇ ಇದ್ದರು. "ನನ್ನ ಪತ್ನಿ ತುಂಬಾ ಕಷ್ಟ ಪಟ್ಟವಳು. ಸಂಸಾರದ ಭಾರ ನನ್ನ ಮೇಲೆ ಹೊರಿಸಲೇ ಇಲ್ಲ. ಹೀಗಾಗಿ ಸಾಹಿತ್ಯದಲ್ಲಿ ನಾನು ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯ ಆಯಿತು. ತಿಂಗಳಿಗೊಂದು ಸಲ ಒಂದು ಸಣ್ಣ ಪೇಪರ್ ನ ಅವಳ ಕೈಗೆ ಕೊಡುತ್ತಿದ್ದೆ, ಅಷ್ಟೆ. (ಪೇಪರ್ ಎಂದರೆ ಸ್ಯಾಲರಿ ಚೆಕ್!). ಅಷ್ಟು ಬಿಟ್ಟರೆ ಸಂಸಾರದ ಕಡೆ ಗಮನವನ್ನೇ ಕೊಡ್ತಿರಲಿಲ್ಲ ನಾನು. ಆದರೆ ಒಂಚೂರೂ ಗೊಣಗಾಡದೆ ಸಂಸಾರ ತೂಗಿಸಿದವಳು ಅವಳು" ಎಂದು ಗಂಭೀರವಾಗೇ ಹೇಳಿದರು. ಮರುಕ್ಷಣವೇ ಮೆಲುದನಿಯಲ್ಲಿ, "ಅವಳು ಎದುರಿಗೆ ಇದ್ದಾಳೆ ಅಂತ ಹೀಗೆ ಹೊಗಳ್ತಾ ಇದೀನಿ. ಇಲ್ದೇ ಹೋದ್ರೆ ನೀವು ಹೋದ ಮೇಲೆ ನನ್ನನ್ನ ಅವ್ಳು ಬಿಡ್ತಾಳೆಯೇ?" ಎಂದರು. ಅವರ ಪತ್ನಿಯೂ ಸೇರಿದಂತೆ ಎಲ್ಲರೂ ನಕ್ಕೆವು. ನನ್ನ ಜೊತೆ ಎಲ್ ಬಿ ಅವರ ಶಿಷ್ಯರಾದ ನಾಗಣ್ಣ ಅವರೂ ಇದ್ದರು. ತರಂಗಕ್ಕೆ ಈ ಮುನ್ನ ಎಲ್ ಬಿ ಸಂದರ್ಶನ ಮಾಡಿದ್ದ ಅವರು ಫೋಟೋ ತೆಗೆಸಲು ತಿಪ್ಪೇಸ್ವಾಮಿ ಅವರ ಜೊತೆ ಬಂದಿದ್ದರು. ಎಲ್ ಬಿ ಮತ್ತು ಅವರ ಶ್ರೀಮತಿಯವರ ಫೋಟೋ ತೆಗೆಯುವುದಾಗಿ ತಿಪ್ಪೇಸ್ವಾಮಿ ಕೋರಿಕೊಂಡರು. ಆಗ ಎಲ್ ಬಿ ಅವರು ತಮ್ಮ ಶ್ರೀಮತಿ ಪಕ್ಕ ಫೋಟೋಗೆ ಪೋಸ್ ಕೊಡಲು ನಿಲ್ಲುತ್ತಾ, "ಈ ಛಾಯಾಗ್ರಾಹಕರು ಎಷ್ಟು ಒಳ್ಳೆ ಕೆಲಸ ಮಾಡ್ತಾರೆ ನೋಡಿ. ಗಂಡ-ಹೆಂಡಿರನ್ನ ಒಂದುಗೂಡಿಸೋ ಕೆಲ್ಸ ಮಾಡ್ತಾರೆ. ನಿಜವಾಗಿಯೂ ಇವರಿಗೆ ನೋಬೆಲ್ ಶಾಂತಿ ಪುರಸ್ಕಾರ ಕೊಡಿಸಬೇಕು" ಎಂಬ ಚಾಟಿ ಎಸೆದರು. ಫೋಟೋ ತೆಗೆವುದು ಮರೆತು ತಿಪ್ಪೇಸ್ವಾಮಿ ನಗುತ್ತಾ ನಿಂತರು.
ವ್ಯವಸ್ಥೆಯ ವಿರುದ್ಧದ ಎಲ್ ಬಿ ಅವರ ಸಿಟ್ಟು, ತಮಾಷೆ, ಮಾತಿನ ಪಂಚ್, ಟೈಮಿಂಗ್, ಜೀವನ ಪ್ರೀತಿ, ಸರಳತೆ ಇವುಗಳಿಗೆ ಮಾರು ಹೋಗದೇ ಇರಲು ಹೇಗೆ ಸಾಧ್ಯ? ಆ ಪ್ರಾಜ್ಞರು ವಯಸ್ಸಿನಲ್ಲಿ ನನಗಿಂತ ಮೂರು ಪಟ್ಟು ಹಿರಿಯರು. ನಾನು ಹುಟ್ಟುವ ಹೊತ್ತಿಗಾಗಲೇ ಅವರು ನಿವೃತ್ತರಾಗಿದ್ದರು. ಅವರೊಂದಿಗೆ ಕಳೆದ ಆ ಎರಡು ಗಂಟೆಗಳು, ನನ್ನ ಅಮೂಲ್ಯ ಕ್ಷಣಗಳು...

Saturday, 14 February 2009

ದಾವಣಗೆರೆ ದಿನಗಳು-1

ನಿಗಿನಿಗಿ ಉರಿಯುತ್ತಿರುವ ಕೆಂಡಗಳ ಮೇಲೆ ಸಪಾಟು ಕರಿ ಕಡಪದ ಕಲ್ಲು. ಆಯತಾಕಾರದ ಆ ಕಲ್ಲು ಎಷ್ಟು ದೊಡ್ಡದೆಂದರೆ ಒಂದು ಸಲಕ್ಕೆ 12 ದೋಸೆ ಚೊಯ್ ಅನಿಸಬಹುದು. ಬೆಳಗ್ಗೆ 6ಕ್ಕೇ ಅಂಗಳಕ್ಕಿಳಿದು ಬಲಗೈ ಹಾಗೂ ಎಡಗೈಯಲ್ಲಿ ತಲಾ ಒಂದೊಂದು ಗಂಟೆ ಬ್ಯಾಡ್ಮಿಂಟನ್ ಆಡಿ, ಟೈಮ್ ಇದ್ದರೆ ಒಂದು ಗಂಟೆ ಸ್ವಿಮಿಂಗ್ ಪೂಲ್ ನಲ್ಲಿ ಹಾರಾಡಿ, ಬೆಣ್ಣೆದೋಸೆ ಹೋಟೆಲ್ ನಲ್ಲಿ ಕುಳಿತುಕೊಳ್ಳುವಾಗ್ಗೆ 9.30 ದಾಟಿರುತ್ತಿತ್ತು. ದಾವಣೆಗೆರೆಯ ಡೆಂಟಲ್ ಕಾಲೇಜು ಎದುರಿನ 'ಕೊಟ್ಟೂರೇಶ್ವರ ಬೆಣ್ಣೆದೋಸೆ' ಹೋಟೆಲ್ ಅದು. ಮೈಕೈ ಕಾಲುಗಳೆಲ್ಲಾ ಆಹ್ಲಾದಕರವಾಗಿ ನೋಯುತ್ತಿದ್ದರೆ, ನಿಗಿನಿಗಿ ಕೆಂಡದ ಮೇಲೆ ಚೊಯ್ ಗುಡುವ ಖಾಲಿ, ಬೆಣ್ಣೆ ದೋಸೆಗಳನ್ನು ನೋಡುವುದು ಮತ್ತೊಂದು ಬಗೆಯ ಆಹ್ಲಾದ ತರುತ್ತಿತ್ತು. ಹಾಗೆ ಒಂದು ಸಲಕ್ಕೆ ತಯಾರಾಗುತ್ತಿದ್ದ 12 ದೋಸೆಗಳನ್ನೂ ಆರ್ಡರ್ ಮಾಡಿ ಅನಾಮತ್ತು ಬಾಯಿಗಿಳಿಸುತ್ತಿದ್ದ ದಿನಗಳೂ ಇದ್ದವು. ದೋಸೆಯ ಮೇಲೆ ಮುಕುಟದೋಪಾದಿಯಲ್ಲಿ ಕುಳಿತು, ಶ್ವೇತ ವರ್ಣದಿಂದ ಕಂಗೊಳಿಸುತ್ತಿದ್ದ ಬೆಣ್ಣೆಯಾಗಲೀ, ಲವಂಗಭರಿತ ಕಾಯಿಚಟ್ಟಿ-ಸಪ್ಪೆ ಆಲು ಪಲ್ಯವಾಗಲೀ ನಾನು ಎಂದೂ ಮರೆಯಲಾಗದ ತಿನಿಸುಗಳು. ಕೊಟ್ಟೂರೇಶ್ವರ ಅಲ್ಲದೇ ಹಳೇ ಬಸ್ ಸ್ಟಾಂಡ್ ಎದುರಿನ ಸಣ್ಣ ಮನೆ ಕಂ ಹೋಟಿಲ್ ನಲ್ಲೂ ಬೆಣ್ಣೆ ದೋಸೆ ಸೊಗಸಾಗಿರುತ್ತಿತ್ತು. ಅದರ ರುಚಿ, ಚಟ್ನಿಯ ಸ್ವರೂಪ ಬೇರೊಂದು ಬಗೆ. ಇನ್ನು ನಮ್ಮ ಪ್ರಜಾವಾಣಿ ಕಚೇರಿ ಹತ್ತಿರದ, ಕೆಟಿ ಜಂಬಣ್ಣ ಸರ್ಕಲ್ ಮೂಲೆಯಲ್ಲಿದ್ದ ಅಂಗಡಿಯೊಂದರಲ್ಲಿ ಇಡ್ಲಿ, ವಡೆ, ಪುಳಿಯೋಗರೆ, ಅವಲಕ್ಕಿ, ಚಿತ್ರಾನ್ನ ಸಿಗುತ್ತಿತ್ತು. ಅವಂತೂ ಒಂದಕ್ಕಿಂತ ಒಂದು ರುಚಿಕರವಾಗಿರುತ್ತಿದ್ದವು. ನಾನು ಕಸರತ್ತು ಮಾಡುತ್ತಿದ್ದ ದಿನಗಳಲ್ಲಿ ಅಲ್ಲಿಂದಲೇ ಮುಂಜಾನೆ ಬರೋಬ್ಬರಿ 20 ಇಡ್ಲಿಗಳನ್ನು ಕಟ್ಟಿಸಿಕೊಂಡು ಹೋಗಿ ತಿಂದು, ನೀರು ಕುಡಿದು ಮಲಗಿದೆ ಎಂದರೆ ಏಳುತ್ತಿದ್ದುದು ಮಧ್ಯಾಹ್ನದ ಮೇಲೆಯೇ. ತೀರಾ ಕಡಿಮೆ ಬೆಲೆಗೆ ಗುಣಮಟ್ಟದ, ರುಚಿಕರವಾದ ತಿಂಡಿ ಸಿಗುವುದು ಪ್ರಾಯಶಃ ದಾವಣಗೆರೆಯಲ್ಲಿ ಮಾತ್ರ. ಹಳೇ ದಾವಣಗೆರೆಯ ಗಡಿಯಾರ ಕಂಬದ ಬಳಿ ಕೇವಲ ಒಂದು ರೂಪಾಯಿಗೆ ಬೆಣ್ಣೆ ದೋಸೆ ಈಗಲೂ ಸಿಗುವುದಂತೆ! ವಿದ್ಯಾನಗರದ ಮಹಾತ್ಮಗಾಂಧಿ ಪ್ರತಿಮೆ ಬಳಿ ಗುಡಿಸಲೊಂದರಲ್ಲಿ ದೋಸೆ ಮಾಡುತ್ತಿದ್ದರು. ಪೇಪರ್ ಗಿಂತಲೂ ತೆಳುವಾದ ಆ ದೋಸೆಯ ರುಚಿ ಅಲ್ಲಿ ಬಿಟ್ಟರೆ ಇನ್ನೆಲ್ಲೂ ಸಿಗದು. ಇಡೀ ಒಂದು ದೋಸೆಯನ್ನು ಮಡಿಚಿ ಒಂದೇ ಸಲಕ್ಕೆ ಬಾಯಿಗಿಳಿಸುವುದು ನನಗೆ ಅಭ್ಯಾಸವಾಗಿದ್ದೇ ಅಲ್ಲಿ.
ದಾವಣಗೆರೆಯ ಊಟ ಅಂದರೆ ಅದೊಂಥರ ಉತ್ಸವದ ಹಾಗೆ. ಖಡಕ್ ರೊಟ್ಟಿ, ಚಪಾತಿ, ಜೋಳದ ರೊಟ್ಟಿ ಅದಕ್ಕೆ ಬದನೆಕಾಯಿ ಎಣ್ಣೆಗಾಯಿ, ಕಡ್ಲೆಬೀಜದ ಚಟ್ನಿ- ಅದಕ್ಕೆ ಮೊಸರು, ಸೊಪ್ಪಿನ ಪಲ್ಯ, ಹಸಿ ಸೊಪ್ಪು, ಕಡ್ಲೆಕಾಳು ಕೋಸಂಬರಿ, ಹೋಳಿಗೆ, ಮಾವಿನಹಣ್ಣಿನ ಸೀಕರಣೆ, ಚಿತ್ರಾನ್ನ, ಬಿಳಿ ಅನ್ನ, ಅದಕ್ಕೆ ನುಗ್ಗೇಕಾಯಿ ಸಾಂಬಾರು; ಇನ್ನು ಮೆಣಸಿನಕಾಯಿ ಬಜ್ಜಿ ಇಲ್ಲದೇ ಹೋದರೆ ಅದು ದಾವಣಗೆರೆಯ ಊಟವೇ ಅಲ್ಲ...
ಇನ್ನು ಬೀರೇಶ್ವರ ವ್ಯಾಯಾಮ ಶಾಲೆಯ ಉಸ್ತಾದರೂ, ಮಾಜಿ ಶಾಸಕರೂ ಆದ ಕೆ. ಮಲ್ಲಪ್ಪ ಅವರು ನಿಯಮಿತವಾಗಿ ದ್ವೈಮಾಸಿಕ ಪತ್ರಿಕಾಗೋಷ್ಠಿ ಏರ್ಪಡಿಸುತ್ತಿದ್ದರು. ಕುಸ್ತಿ ಪಂದ್ಯಾವಳಿಯ ಬಗ್ಗೆ ವಿವರ ನೀಡಿ ಅವರು ಸುಮ್ಮನಾಗುತ್ತಿರಲಿಲ್ಲ. ಪಾಕ್-ಚೀನಾ ಗಡಿ ಭಾಗದಲ್ಲಿ ಬಳ್ಳಾರಿ ಜಾಲಿ ಗಿಡಗಳನ್ನು ನೆಡುವ ಮೂಲಕ ದೇಶಕ್ಕೆ ರಕ್ಷಣೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆಯನ್ನೂ ಕೊಡುತ್ತಿದ್ದರು. ನಾನು ಪತ್ರಿಕಾಗೋಷ್ಠಿಗೆ ಹೋಗಿರುವುದನ್ನು ದೃಢಪಡಿಸಿಕೊಂಡ ಮೇಲಷ್ಟೇ ಮಾತು ಆರಂಭಿಸುತ್ತಿದ್ದರು. ಗೋಷ್ಠಿ ಮುಗಿದ ಮೇಲೆ ಸೊಗಸಾದ ದೇಸಿ ಊಟ. ಯಾವುದೇ ಪತ್ರಿಕಾ ಗೋಷ್ಠಿಯ ಊಟ ತಪ್ಪಿಸಬಹುದಾದರೂ ಮಲ್ಲಪ್ಪ ಅವರ ಗೋಷ್ಠಿಯ ಊಟವನ್ನು ತಪ್ಪಿಸುವಂತಿರಲಿಲ್ಲ. ಅದು ಕುಸ್ತಿಪಟುವೊಬ್ಬ ನಿರಾಕರಿಸಲಾಗದ ಊಟ. ಗಡದ್ದು ಊಟವಾದ ಮೇಲೆ, 'ಚಾಪೆ ಹಾಸಿ ಕೊಡಲೇ, ಸ್ವಲ್ಪ ಹೊತ್ತು ಮಲಗುತ್ತೀರೇ?' ಎಂದು ಕೇಳುತ್ತಿದ್ದರು ಮುಗ್ಧ ಮಲ್ಲಪ್ಪ... ದಾವಣಗೆರೆಯ ದಿನಗಳವು.
ಈಗಲೂ ಊಟದ ವಿಷಯ ಬಂದಾಗಲೆಲ್ಲಾ ದಾವಣಗೆರೆಯ ಮಾತು ತೆಗೆಯದೇ ಹೋದರೆ ನನಗೆ ಸಮಾಧಾನವಾಗುವುದಿಲ್ಲ. ದೆಹಲಿಯಲ್ಲಿ ಒಂದು ವರ್ಷ ಚೋಲೆ ಬಟೂರೆ, ಚೌಮೀನ್ ಗಳ ಮಧ್ಯೆ ನಾನು ಸೊರಗಿ ಹೋಗಿದ್ದಾಗ ದಾವಣಗೆರೆ ತಿಂಡಿ-ತಿನಿಸುಗಳ ಮೇಲಿನ ಗೌರವಾದರ ಇನ್ನಷ್ಟು ಹೆಚ್ಚಾಯಿತು.