Friday 21 September 2007

ನವಿಲು ಗರಿ

ಕಾಲದ ಪರಿವೆಯೇ ಇಲ್ಲದೆ ಆ ಗೊಂಡಾರಣ್ಯದಲ್ಲಿ ಹಾಗೆ ನಾನು ಅಲೆದಾಡುತ್ತಿದ್ದಾಗ ಅದೆಲ್ಲಿಂದಲೋ ಒಂದು ಗರಿ ನನ್ನತ್ತಲೇ ಹಾರುತ್ತಾ ಬರತೊಡಗಿತು. ಅದು ಯಾವ ಗಿಡದ ಗರಿ? ನಿಜವಾಗಿ ಗಿಡದ್ದೋ, ಇಲ್ಲಾ ಯಾವುದಾದರೂ ಹಕ್ಕಿಯದೋ? ಹಕ್ಕಿಯದಾದರೆ ಏನು ಪಾರಿವಾಳದ್ದೇ? ಪಿಕಳಾರದ್ದೇ? ನವಿಲಿನದೇ?
...ಅದ್ಯಾವ ಗರಿಯೋ ಏನು ಕಥೆಯೋ ಅಂತೂ ಆ ಗರಿ ನನ್ನನ್ನ ಮುಟ್ಟದಿರಲಿ ಅಂತ ಓಡುತ್ತಲೇ ಹೋದೆ. ಒಂದು ಕ್ಷಣ ಸುಧಾರಿಸಿಕೊಂಡರೆ ಮತ್ತೆ ಹಿಂದೆಯೇ ಹಾರಿ ಬರುತ್ತಿತ್ತು ಗರಿ: ಮತ್ತೆ ಓಟ, ಬಿಡುವಿಲ್ಲದ ಓಟ. ಕೊಂಚ ಹೊತ್ತು ಬಿಟ್ಟು ತಿರುಗಿ ನೋಡಿದರೆ ನೂರಾರು ಗರಿಗಳು! ಅಯ್ಯೋ, ಇದೇನು ಕಾಟ? ಮತ್ತೆ ಓಟ, ಎಲ್ಲೂ ನಿಲ್ಲದ ಓಟ. ಗರಿಗಳು ಹಾರುತ್ತಾ ಬಂದೇ ಬಂದವು. ನಾನು ಓಡೇ ಓಡಿದೆ, ಹಿಂದಿರುಗಿ ನೋಡದೆ.

ಅಬ್ಬಾ ಎಂಥಾ ಸುಸ್ತು! ಒಂದು ಗವಿ ಕಂಡಿತು, ನೋಡೋಣ ಇದು ಯಾವ ಗವಿ: ಒಳಹೊಕ್ಕೆ. ನಡೆದೇ ನಡೆದೆ, ಹಿಂದಿರುಗದೆ. ಅರಿವಿಲ್ಲದೆ ಸಾಗಿದ್ದು ಪಾತಾಳಕ್ಕೆ. ಕಗ್ಗತ್ತಲೆಯಲ್ಲಿ ಗರಿಗಳ ಸುಳಿವೇ ಇಲ್ಲ. ಅಯ್ಯೋ ಈ ಗವಿಯ ಕೊನೆ ಎಲ್ಲಿ? ಹಿಂದಿರುಗುವ ಹಾದಿ ಯಾವುದು? ಯಾವುದಾದರೊಂದು ಗರಿಯಾದರೂ ಕಂಡೀತೇ? ಊಹೂಂ. ಯುಗಗಳು ಕಳೆದರೂ ಗರಿಗಳ ಸುಳಿವೇ ಇಲ್ಲ.
ಒಂದು ದಿನ ಒಮ್ಮೆಗೇ ಪ್ರಖರ ಬೆಳಕು. ಪ್ರಭೆ ಸೂಸುವ ಜ್ಯೋತಿರ್ಮಣಿ. ಅಬ್ಬಾ. ಅಂತೂ ಪಾತಾಳದಿಂದ ಹೊರಬೀಳುವ ಹಾದಿ ಕಂಡಂತಾಯಿತು. ಓಡಿ ನೋಡಿದರೆ ಪ್ರಖರ ಪ್ರಭೆ ಸೂಸುತ್ತಿತ್ತು ಒಂದು ಗರಿ, ನವಿಲು ಗರಿ!
ಈಗ ಅದೆಷ್ಟು ಯುಗಗಳು ಕಳೆದವೋ ತಿಳಿಯದು; ಓಡುತ್ತಲೇ ಇದ್ದೇನೆ ಹಿಡಿಯಲು ಆ ನವಿಲು ಗರಿ.

3 comments:

Prakash Shetty said...

ನವಿಲುಗರಿಯ ಹುಡುಕಾಟದಲ್ಲಿ...
ಹುಡುಗಾಟ ತೋರದಿರಿ...

ಹಿಂಬಾಲಿಸಿ...
ನೋಡೇ ಬಿಡೋಣ..

ಆ ಗರಿ ಆ ಗರಿ ಕೈಗೆ ಸಿಗದೆ
ಎಲ್ಲೋಡಿ ಹೋಗಿ ಬಿಡುವುದೆಂದು....

ಚಿತ್ರಾಕರ್ಕೇರಾ, ದೋಳ್ಪಾಡಿ said...

ಸರ್,
ನವಿಲು ಗರಿಯ ಹುಡುಕಾಟಕ್ಕೆ "ಶುಭವಾಗಲಿ"

Unknown said...

ಕೃಷ್ಣಾಷ್ಟಮಿಯ ದಿನ ಹುಟ್ಟಿದವರಿಗೆ ಮಾತ್ರ ನವಿಲು ಮತ್ತು ಗರಿಯ ಅರ್ಥ ಗೊತ್ತಿರುತ್ತದೆ. ಬರಿ ಬಿದಿರಿನ ಚದುರೆ ಎಂದುಕೊಂಡವರಿಗಲ್ಲ.......!! ಚೆನ್ನಾಗಿದೆ. ಬ್ಲಾಗ್ ಥ್ಯಾಂಕ್ಯೂ ಓದಲು ಇಷ್ಟಾದರೂ ಕೊಟ್ಟದ್ದಕ್ಕೆ!!